ಓಮ್ರಿಕಾನ್ ನಿಯಂತ್ರಣಕ್ಕೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ​

ಓಮ್ರಿಕಾನ್ ನಿಯಂತ್ರಣಕ್ಕೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ​

ತುಮಕೂರು: ಕೋವಿಡ್ ಮೂರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಶಾಲಾ ಕಾಲೇಜುಗಳಲ್ಲಿ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಿದ್ಧಗಂಗಾ ಮಠದಲ್ಲಿ ಕಾರ್ತಿಕ ಮಾಸದ ಕಡೆ ಸೋಮವಾರದ ಅಂಗವಾಗಿ ವೀರಶೈವ ಲಿಂಗಾಯತ ಯುವ ವೇದಿಕೆ ಹಮ್ಮಿಕೊಂಡಿದ್ದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ಕೋವಿಡ್ ಪ್ರಕರಣಗಳು ಕಂಡು ಬಂದರೆ ಕ್ಲಸ್ಟರ್ ವಲಯವೆಂದು ಘೋಷಿಸಿ ಸೋಂಕು ಹರಡದಂತೆ ಕ್ರಮವಹಿಸಲಾಗಿದೆ. ವಿದೇಶ ಮತ್ತು ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದ್ದು, ಗಡಿ ಭಾಗದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಓಮ್ರಿಕಾನ್ ಸೋಂಕಿತರ ಗಂಟಲು ದ್ರವ ಮಾದರಿಯನ್ನು ಪ್ರಯೋಗಕ್ಕೆ ಒಳಪಡಿಸುತ್ತಿದ್ದು, ವೈರಾಣು ಹೊಸ ರೂಪಾಂತರಿ ಓಮ್ರಿಕಾನ್ ಅಥವಾ ಡೆಲ್ಟಾ ಪ್ಲಸ್ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಆಗಿರುವ ಬೆಳೆ ಹಾನಿ ಪರಿಹಾರಕ್ಕೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ₹685 ಕೋಟಿ ಹಣವಿದ್ದು, ಅನುದಾನ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಕೇಂದ್ರ ತಂಡ ಬಂದು ಸಮೀಕ್ಷೆ ನಡೆಸಿದ ನಂತರ ಹೆಚ್ಚಿನ ಪರಿಹಾರ ದೊರಕಲಿದೆ ಎಂದು ಹೇಳಿದರು. ಹಾನಿ ವಿವರಗಳನ್ನು ದಾಖಲಿಸುವ ಮೂಲಕ ಪರಿಹಾರ ಪಡೆಯಬಹುದಾಗಿದೆ ಎಂದರು.

ಶಿವಕುಮಾರ ಸ್ವಾಮೀಜಿ ಜನ್ಮದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲು ಸರ್ಕಾರ ತೀರ್ಮಾನ ಕೈಗೊಂಡಿದ್ದು, ಸಿದ್ಧಲಿಂಗ ಸ್ವಾಮೀಜಿ ಅವರೊಂದಿಗೆ ಚರ್ಚಿಸಿ ದಾಸೋಹ ದಿನದ ರೂಪುರೇಷೆ ರೂಪಿಸಲಾಗುವುದು ಎಂದು ತಿಳಿಸಿದರು.

ಶಿವಕುಮಾರ ಶ್ರೀಗಳು ಬದುಕಿದ್ದ ಕಾಲಘಟ್ಟದಲ್ಲಿ ಬದುಕಿದ್ದ ನಾವುಗಳೇ ಧನ್ಯರು, ಅವರ ನೆನಪಿನಲ್ಲಿ ನಡೆಯುತ್ತಿರುವ ಲಕ್ಷ ಬಿಲ್ವಾರ್ಚನೆಯಲ್ಲಿ ಪಾಲ್ಗೊಂಡಿರುವುದು ನನ್ನ ಪುಣ್ಯ ಎಂದು ಸ್ಮರಿಸಿದರು.

ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ದಂಪತಿ ಸಮೇತ ಪೂಜೆ ಸಲ್ಲಿಸಿದ ನಂತರ ಸಿದ್ಧಲಿಂಗ ಸ್ವಾಮೀಜಿ ಆರ್ಶೀವಾದ ಪಡೆದು ಮಾತುಕತೆ ನಡೆಸಿದರು.