ಗ್ರಾ.ಪಂ ಕಚೇರಿಯಲ್ಲಿ ಜಿಲೇಟಿನ್ ಸ್ಪೋಟಿಸಿ ದಾಖಲೆಗಳ ನಾಶಕ್ಕೆ ಯತ್ನ
ತುಮಕೂರು: ಗ್ರಾಮ ಪಂಚಾಯತಿ ಕಚೇರಿಯಲ್ಲಿ ಜಿಲೇಟಿನ್ ಸ್ಫೋಟವಾಗಿ ಕಚೇರಿ ಬಿರುಕು ಬಿಟ್ಟಿರುವ ಘಟನೆ ಪಾವಗಡ ತಾಲ್ಲೂಕಿನ ಬೂದಿಬೆಟ್ಟದಲ್ಲಿ ನಡೆದಿದೆ. ಪಾವಗಡ ತಾಲ್ಲೂಕು ಗಡಿ ಭಾಗವಾದ ವೈಎನ್ ಹೊಸಕೋಟೆ ಸಮೀಪದ ಬೂದಿಬೆಟ್ಟ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ರಾತ್ರಿ ಸ್ಫೋಟ ಸಂಭವಿಸಿದೆ. ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಸ್ಫೋಟ ನಡೆಸಿದ್ದಾರೆ.
ಕಚೇರಿಯ ಹಿಂಭಾಗದ ಕಿಟಕಿಯನ್ನು ಕಿತ್ತು ಒಳ ನುಗ್ಗಿರುವ ದುಷ್ಕರ್ಮಿಗಳು ಸಭಾಂಗಣದ ಮೂಲೆಯಲ್ಲಿ ಇಳಿಸಿರುವ ದಾಖಲೆಗಳ ಅಲೆಮಾರಿಗೆ ಹೊಂದಿಕೊಂಡಂತೆ ಇರುವ ಕುರ್ಚಿಯ ಮೇಲೆ ಸ್ಫೋಟಕ ಇಟ್ಟಿದ್ದು, ಸ್ಫೋಟದಿಂದ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಕುರ್ಚಿಗಳು ಸುಟ್ಟು ಹೋಗಿವೆ. ರಾತ್ರಿ ಇದ್ದಕ್ಕಿದ್ದಂತೆ ಭಾರಿ ಸದ್ದು ಕೇಳಿ ಬಂತು. ಗಾಬರಿಗೊಂಡ ಜನರು ಹೋಗಿ ನೋಡಿದಾಗ ಸ್ಥಳದಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದ ದೃಶ್ಯ ಕಂಡು ಬಂದಿದೆ. ಜಿಲೆಟಿನ್ ಪೌಡರ್ ಬಳಸಿ ಈ ಕೃತ್ಯ ಮಾಡಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತನಿಖೆಯಿಂದ ಸತ್ಯ ಹೊರಬೀಳಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ದಾಖಲೆಗಳ ನಾಶಕ್ಕೆ ಈ ರೀತಿಯ ಕೃತ್ಯ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯವಾಗಿ ಕಲ್ಲು ಗಣಿಗಾರಿಕೆಗೆ ಬಳಸುವ ಜಿಲೇಟಿನ್ ಸ್ಫೋಟಕ್ಕೆ ಬಳಸಲಾಗಿದ್ದು, ಪೌಡರ್ ಗ್ರಾ.ಪಂ.ಆವರಣದಲ್ಲಿ ಬಿದ್ದಿದೆ ಎಂದು ಸಾರ್ವಜನಿಕರುತಿಳಿಸಿದ್ದಾರೆ.