ಹಿಂದಿಯಲ್ಲಿಯೂ ಅಬ್ಬರಿಸುತ್ತಿದೆ ಕಾಂತಾರ..! ಸೆಲೆಬ್ರಿಟಿಗಳಿಂದಲೂ ಭಾರಿ ಶ್ಲಾಘನೆ

ನವದೆಹಲಿ: ಸಿನಿಮಾ ರಂಗದಲ್ಲಿಯೇ ಚಿಂದಿ ಉಡಾಯಿಸಿರುವ ರಿಷಭ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಇದೀಗ ಹಿಂದಿ ಬಾಕ್ಸ್ ಆಫೀಸ್ ನಲ್ಲೂ ಅಬ್ಬರಿಸುತ್ತಿದೆ. ವಾರಾಂತ್ಯದ ನಂತರ ಚಿತ್ರವು ಕೋಟಿ ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ.
ಈ ಮೂಲಕ ಊಹಿಸಿದ್ದಕ್ಕಿಂತಲೂ ಹೆಚ್ಚಿನ ದಾಖಲೆ ನಿರ್ಮಿಸುತ್ತಲೇ ಇದೆ.
"ವಾರದ ದಿನಗಳಲ್ಲಿ ಟಿಕೆಟ್ ದರವನ್ನು ಕಡಿಮೆ ಮಾಡಿದ್ದರೂ, ಸೋಮವಾರದಂದು ಕಾಂತಾರದ ಹಿಂದಿ ಆವೃತ್ತಿಯು ಸೂಪರ್-ಸ್ಟ್ರಾಂಗ್ ಆಗಿದೆ ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ತಿಳಿಸಿದ್ದಾರೆ. ಕಳೆದ ಶುಕ್ರವಾರ 1.27 ಕೋಟಿ, ಶನಿವಾರ 2.75 ಕೋಟಿ, ಭಾನುವಾರ 3.50 ಕೋಟಿ, ಸೋಮವಾರ 1.75 ಕೋಟಿ. ಹೀಗೆ ಒಟ್ಟು: 9.27 ಕೋಟಿ ರೂಪಾಯಿ ಕಲೆಕ್ಷನ್ ಆಗಿರುವುದಾಗಿ ಅವರು ವಿವರಿಸಿದ್ದಾರೆ.
ಪ್ರಭಾಸ್, ಧನುಷ್, ಅನಿಲ್ ಕುಂಬ್ಳೆ, ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್ ಮತ್ತು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಂತಹ ಪ್ರಮುಖ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕಾಂತಾರ ವಿಶ್ವದಾದ್ಯಂತ 100 ಕೋಟಿ ಮೊತ್ತವನ್ನು ಮೀರಿ ದಾಖಲೆ ಸೃಷ್ಟಿಸಿದೆ. ಚಿತ್ರವು ಹೆಚ್ಚಿನ ದಾಖಲೆಯನ್ನು ಕನ್ನಡ ಆವೃತ್ತಿಯಿಂದಲೇ ಪಡೆದುಕೊಂಡಿದೆ ಎಂದು ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲಾ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ರಮೇಶ್, ಹೆಚ್ಚಿನ ಗಳಿಕೆ ಕನ್ನಡ ಆವೃತ್ತಿಯಿಂದಲೇ ದೊರಕಿದೆ ಎಂದು ತಿಳಿಸಿದ್ದಾರೆ.