'ಶತಕ'ದ ಹೊಸ್ತಿಲಲ್ಲಿ ಪೂಜಾರ

'ಶತಕ'ದ ಹೊಸ್ತಿಲಲ್ಲಿ ಪೂಜಾರ

ವದೆಹಲಿ : ಹದಿನೇಳು ವರ್ಷಗಳ ಹಿಂದಿನ ಮಾತು. ಚೇತೇಶ್ವರ್ ಪೂಜಾರ ತಮ್ಮ ತಾಯಿ ರೀನಾ ಅವರಿಗೆ ಕರೆ ಮಾಡಿದ್ದರು. ತಾವು ರಾಜ್‌ಕೋಟ್ ಬಸ್‌ ನಿಲ್ದಾಣಕ್ಕೆ ಬರುತ್ತಿದ್ದು ಮನೆಗೆ ಕರೆದೊಯ್ಯಲು ಅಪ್ಪನಿಗೆ ತಿಳಿಸಿ ಎಂದಿದ್ದರು. ಆದರೆ ಚೇತೇಶ್ವರ್ ಬಸ್‌ನಿಲ್ದಾಣ ತಲುಪಿದಾಗ ಅಪ್ಪ ಬಂದಿರಲಿಲ್ಲ.

ಆದರೆ ತಮ್ಮ ತಾಯಿಯ ನಿಧನದ ಸುದ್ದಿಯು ಬಸ್‌ನಿಲ್ದಾಣಕ್ಕೆ ಬಂದ ಸಂಬಂಧಿಯೊಬ್ಬರು ತಿಳಿಸಿದ್ದರು.

ಅಂದು ತಾಯಿಯ ನಿಧನದ ಆಘಾತದ ಸುದ್ದಿ ಕೇಳಿ ಕುಸಿದುಹೋಗಿದ್ದ ಪೂಜಾರ ನಂತರ ಅಪ್ಪನ ಆರೈಕೆ ಹಾಗೂ ಕ್ರಿಕೆಟ್ ಪ್ರೀತಿಯಲ್ಲಿ ಬೆಳೆದರು. ಇದೇ 17ರಿಂದ ನವದೆಹಲಿಯಲ್ಲಿ ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್‌ ಪೂಜಾರಗೆ 100ನೇ ಪಂದ್ಯವಾಗಲಿದೆ. ಬಾರ್ಡರ್‌-ಗಾವಸ್ಕರ್ ಟ್ರೋಫಿ ಹಾಗೂ ಪೂಜಾರ ಅವರಿಗೆ ವಿಶೇಷ ನಂಟು ಇದೆ. ಈ ಸಂದರ್ಭದಲ್ಲಿ ಚೇತೇಶ್ವರ್ ತಂದೆ ಹಾಗೂ ಕೋಚ್ ಅರವಿಂದ್ ಮಾತನಾಡಿದ್ದಾರೆ.

'ಯಾವುದೇ ಕ್ರೀಡೆಯಲ್ಲಿ 100 ಪಂದ್ಯಗಳನ್ನು ಆಡುವುದೆಂದರೆ ಸಾಮಾನ್ಯ ಸಂಗತಿ ಅಲ್ಲ. ಅದಕ್ಕಾಗಿ ಬಹಳಷ್ಟು ತ್ಯಾಗ ಮತ್ತು ಪರಿಶ್ರಮ ಬೇಕು. ಸಮರ್ಪಣೆ, ಶಿಸ್ತು, ಫಿಟ್‌ನೆಸ್ ಮತ್ತು ಉತ್ತಮ ಆಹಾರಸೇವನೆಯಿಂದ ಪೂಜಾರ ಈ ಘಟ್ಟ ತಲುಪಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಬೆಳೆದು ನಿಲ್ಲಲು ಅದೃಷ್ಟದ ಪಾಲು ಸ್ವಲ್ಪ ಮಾತ್ರ' ಎಂದು ಚೇತೇಶ್ವರ್ ತಂದೆ ಅರವಿಂದ್ ಪೂಜಾರ ತಿಳಿಸಿದರು.

ಚೇತೇಶ್ವರ್‌ಗೆ ಬಾಲ್ಯದಿಂದ ಇದುವರೆಗೆ ಅಪ್ಪನೇ ಕೋಚ್. ಅರವಿಂದ್ ಅವರು ಸೌರಾಷ್ಟ್ರ ತಂಡವನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದರು.

'ಚೇತೇಶ್ವರ್‌ಗೆ ತರಬೇತಿ ಕೊಡಲು ಆರಂಭಿಸಿದಾಗ ಯಾವುದೇ ಸ್ಪಷ್ಟ ಗುರಿ ಇರಲಿಲ್ಲ. ಆದರೆ ಅಪಾರ ಪರಿಶ್ರಮ ಮತ್ತು ಶ್ರದ್ಧೆಯಿಂದ ಕ್ರಿಕೆಟ್ ಕಲಿತರು. ಅಭ್ಯಾಸ ಮಾಡಿದರು. ಇದರಿಂದಾಗಿ ಯಶಸ್ವಿಯಾದರು' ಎಂದು ಅರವಿಂದ್ ನೆನಪಿಸಿಕೊಂಡರು.

'ನನ್ನ ಪತ್ನಿ ತೀರಿಹೋದಾಗ ಚೇತೇ ಶ್ವರ್ ಅಳಲಿಲ್ಲ. ಆದರೆ ಮೌನವಾಗುಳಿದ ಹುಡುಗ, ಮುಂಬೈನಲ್ಲಿ ನಡೆಯುತ್ತಿದ್ದ ವಯೋ ಮಿತಿ ಗುಂಪಿನ ಟೂರ್ನಿಯಲ್ಲಿ ಆಡಲು ಪ್ರಯಾಣಿಸಿದ್ದು ನೆನಪಿದೆ. ಆ ಸಂದರ್ಭದಲ್ಲಿ ನಾನು ಚೇತೇಶ್ವರ್ ಮೇಲೆ ನಿಗಾ ಇಡಲು ತಂಡದ ಕೋಚಿಂಗ್ ಸಿಬ್ಬಂದಿಗೆ ಮನವಿ ಮಾಡಿದ್ದೆ' ಎಂದು ಅರವಿಂದ್ ಹೇಳಿದರು.

'ಚೇತೇಶ್ವರ್ ಆಧ್ಯಾತ್ಮದಲ್ಲಿ ಆಸಕ್ತಿ ಇರುವುದರಿಂದ ದೊಡ್ಡ ಸವಾಲುಗಳನ್ನು ಎದುರಿಸುವ ಶಕ್ತಿ ಇದೆ. ನನ್ನ ಪತ್ನಿ ಅಪಾರವಾಗಿ ಆರಾಧಿಸುತ್ತಿದ್ದ ಹರಚರಣ್ ದಾಸ್‌ ಜಿ ಮಹಾರಾಜ್ ಮತ್ತು ಅವರ ಚಿಕ್ಕಮ್ಮ ಚೇತೇಶ್ವರ್ ಅವರನ್ನು ಬಾಲ್ಯದಲ್ಲಿ ಸಲುಹಿದ್ದಾರೆ. ಬಹಳಷ್ಟು ಜನರು ಚೇತೇಶ್ವರ್ ಬೆಳವಣಿಗೆಗೆ ಸಹಕರಿಸಿದ್ದಾರೆ' ಎಂದರು.