ಹನುಮಾನ್ ದೇಗುಲದ ನವೀಕರಣಕ್ಕೆ 1 ಸಾವಿರ ಕೋಟಿ ರೂ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಘೋಷಣೆ

ಹನುಮಾನ್ ದೇಗುಲದ ನವೀಕರಣಕ್ಕೆ 1 ಸಾವಿರ ಕೋಟಿ ರೂ ತೆಲಂಗಾಣ ಸಿಎಂ ಕೆ  ಚಂದ್ರಶೇಖರ್ ರಾವ್ ಘೋಷಣೆ

ಹೈದರಾಬಾದ್: ತೆಲಂಗಾಣದ ಜಾಗತಿಯಲ್ ಜಿಲ್ಲೆಯ ಕೊಂಡಗಟ್ಟಿಯಲ್ಲಿರುವ ಹನುಮಾನ್ ದೇಗುಲ ಸಂಕೀರ್ಣದ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ. ಖರ್ಚು ಮಾಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತಿಳಿಸಿದ್ದಾರೆ. ಮುಖ್ಯಮಂತ್ರಿ ರಾವ್ ಅವರು ದೇಗುಲಕ್ಕೆ ಭೇಟಿ ನೀಡಿ ಅದರ ಪುನರಾಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು ಎಂದು ಸಿಎಂ ಕಚೇರಿಯ ಅಧಿಕೃತ ಪ್ರಕಟಣೆ ತಿಳಿಸಿದೆ.

ವೈಷ್ಣವ ಸಂಪ್ರದಾಯದ ಪ್ರಕಾರ ದೇವಸ್ಥಾನದ ಪುನರಾಚನೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು. ಹಣದ ಕೊರತೆ ಇಲ್ಲ. 1,000 ಕೋಟಿಯನ್ನು ಮಂಜೂರು ಮಾಡಲು ಮುಖ್ಯಮಂತ್ರಿಗಳು ಸಿದ್ಧರಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಅಂಜನಾದ್ರಿ ಹೆಸರಿನಲ್ಲಿ ವೇದ ಪಾಠಶಾಲೆ ತೆರೆಯಲು ಸೂಕ್ತ ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ದೇವಸ್ಥಾನ ಹಾಗೂ ಸುತ್ತಮುತ್ತಲ ಪ್ರದೇಶಗಳ ಪುನರಾಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ರ್ಚಚಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ಹನುಮ ಜಯಂತಿಯಂತಹ ಸಂದರ್ಭದಲ್ಲಿ ದೇವಸ್ಥಾನಕ್ಕೆ 10 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಇದ್ದು, ಭಕ್ತರಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.