ಸಚಿವ ಅಶ್ವತ್ಥ್‌ನಾರಾಯಣ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಕೈ ಸದಸ್ಯರ ಆಕ್ರೋಶ

ಬೆಂಗಳೂರು : ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಟಿಪ್ಪು ಮಾದರಿಯಲ್ಲಿ ಒಡೆದು ಹಾಕಿ ಎಂದು ಹೇಳಿರುವ ಹೇಳಿಕೆ ವಿಧಾನಸಭೆಯಲ್ಲಿಂದು ಕಾಂಗ್ರೆಸ್ ಸದಸ್ಯರ ಆಕ್ರೋಶ ವ್ಯಕ್ತಪಡಿಸಿ ಸಚಿವ ಅಶ್ವತ್ಥ್‌ನಾರಾಯಣ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಮೀರ್ ಸಾಧಿಕ್‌ನ ವಂಶಸ್ಥರು ಕೆಲವರು ಇದ್ದಾರೆ. ಅವರು ನೇರವಾಗಿ ಹೋರಾಟ ಮಾಡಲ್ಲ. ಈ ರೀತಿ ಪರೋಕ್ಷವಾಗಿ ಪ್ರಚೋದನೆ ಮಾಡುವ ಮಾತುಗಳನ್ನು ಆಡುತ್ತಾರೆ. ಟಿಪ್ಪು ರೀತಿಯಲ್ಲಿ ಸಿದ್ದರಾಮಯ್ಯನವರನ್ನು ಒಡೆದು ಹಾಕುತ್ತೇವೆ ಎಂದು ಹೇಳಿರುವ ಅರ್ಥವೇನು, ಇವರಿಗೆ ಇತಿಹಾಸ ಗೊತ್ತಿದೆಯೇ, ಇದು ದಿಕ್ಕು ತಪ್ಪಿಸುವ ಹೇಳಿಕೆ.
ಸುಪ್ರೀಂ ಕೋರ್ಟ್ ಇತ್ತೀಚೆಗೆ ಇಂತಹ ದ್ವೇಷದ ಮಾತುಗಳನ್ನು ಆಡುವವರ ವಿರುದ್ಧ ಸ್ವಯಂ ಪ್ರಕರಣ ದಾಖಲು ಮಾಡುವಂತೆ ಹೇಳಿದೆ. ಹಾಗಾಗಿ ಶಾಂತಿ ಕದಡುವ ಹೇಳಿಕೆ ನೀಡಿರುವ ಸಚಿವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು. ಸಚಿವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಕಾಂಗ್ರೆಸ್‌ನ ಪ್ರಿಯಾಂಕ ಖರ್ಗೆ, ಕೃಷ್ಣಬೈರೇಗೌಡ, ಈಶ್ಪರ ಖಂಡ್ರೆ ಮತ್ತಿತರ ಕಾಂಗ್ರೆಸ್ ಸದಸ್ಯರು ದನಿಗೂಡಿಸಿ ಸಚಿವರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು.
ಸರ್ಕಾರದಿಂದ ಉತ್ತರ ಕೇಳೋಣ ಎಂದು ಹೇಳಿ ಸಭಾಧ್ಯಕ್ಷರು ಕುಪಿತ ಕಾಂಗ್ರೆಸ್ ಸದಸ್ಯರನ್ನು ಸಮಾಧಾನಪಡಿಸಿ, ಸಚಿವ ಅಶ್ವತ್ಥ್‌ನಾರಾಯಣ ಅವರಿಗೆ ಉತ್ತರ ನೀಡುವಂತೆ ಸೂಚಿಸಿದರು.
ಸಭಾಧ್ಯಕ್ಷರ ಸೂಚನೆಯಂತೆ ಎದ್ದುನಿಂತ ಸಚಿವ ಅಶ್ವತ್ಥ್‌ನಾರಾಯಣ ಅವರು ಮಂಡ್ಯದ ಸಭೆಯಲ್ಲಿ ನಾನು ಕಾಂಗ್ರೆಸ್‌ನ್ನು ಸೋಲಿಸಿ ಎಂಬ ಅರ್ಥದಲ್ಲಿ ಮಾತನಾಡಿದ್ದೇನೆ. ಸಿದ್ದರಾಮಯ್ಯನವರ ಟಿಪ್ಪು ಪ್ರೀತಿಯನ್ನು ಸಹ ಹೇಳಿದ್ದೇನೆ. ಸಿದ್ದರಾಮಯ್ಯನವರಿಗೆ ವೈಯುಕ್ತಿಕವಾಗಿ ಮಾತನಾಡಿಲ್ಲ.