ಬೆಂಗಳೂರಲ್ಲಿ ರಾಕೆಟ್ ಎಂಜಿನ್ ಉತ್ಪಾದನಾ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ಮುರ್ಮು

ಬೆಂಗಳೂರಲ್ಲಿ ರಾಕೆಟ್ ಎಂಜಿನ್ ಉತ್ಪಾದನಾ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ಮುರ್ಮು

ಬೆಂಗಳೂರು, ಸೆ. 27- ರಾಕೆಟ್ ಎಂಜಿನ್ ಅನ್ನು ಒಂದೇ ಸೂರಿನಡಿ ಸಂಪೂರ್ಣವಾಗಿ ಉತ್ಪಾದನೆ ಮಾಡುವ ಇಂಟಿಗ್ರೇಟೆಡ್ ಕ್ರಯೋಜೆನಿಕ್ ಎಂಜಿನ್ ಉತ್ಪಾದನಾ ಸೌಲಭ್ಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಂಗಳೂರಿನಲ್ಲಿಂದು ಉದ್ಘಾಟಿಸಿದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಇಂಟಿಗ್ರೇಟೆಡ್ ಕ್ರಯೋಜೆನಿಕ್ ಎಂಜಿನ್ ಉತ್ಪಾದನಾ ಸೌಲಭ್ಯವನ್ನು (ಐಸಿಎಂಎಫ್) ಸ್ಥಾಪಿಸಿದೆ.

ಸುಮಾರು 4,500 ಚದರ ಮೀಟರ್ ವಿಸ್ತೀರ್ಣದಲ್ಲಿ 70 ಕ್ಕೂ ಹೆಚ್ಚು ಹೈಟೆಕ್ ಉಪಕರಣಗಳನ್ನು ಸ್ಥಾಪಿಸಲಾಗಿದೆ. ಭಾರತೀಯ ರಾಕೆಟ್‍ಗಳ ಕ್ರಯೋಜೆನಿಕ್ (ಸಿಇ20) ಮತ್ತು ಸೆಮಿ-ಕ್ರಯೋಜೆನಿಕ್ (ಎಸ್‍ಇ2000) ಎಂಜಿನ್‍ಗಳ ತಯಾರಿಕೆ ಮತ್ತು ಪರೀಕ್ಷಾ ಸೌಲಭ್ಯಗಳನ್ನು ಈ ಕೇಂದ್ರ ಹೊಂದಿದೆ.

2013 ರಲ್ಲಿ ಏರೋಸ್ಪೇಸ್ ವಿಭಾಗದ ಕ್ರಯೋಜೆನಿಕ್ ಎಂಜಿನ್ ಮಾಡ್ಯೂಲ್‍ಗಳನ್ನು ತಯಾರಿಸುವ ಸೌಲಭ್ಯವನ್ನು ಸ್ಥಾಪಿಸಲು ಎಚ್‍ಎಎಲ್ ನೊಂದಿಗೆ ಇಸ್ರೋ ಸಹಿ ಹಾಕಿತ್ತು. 2016ರಲ್ಲಿ 208 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಐಸಿಎಂಎಫ್ ಸ್ಥಾಪನೆಗೆ ತಿದ್ದುಪಡಿ ಮಾಡಲಾಯಿತು.

ಇಂದು ಕೇಂದ್ರದ ಉದ್ಘಾಟನೆ ವೇಳೆ ರಾಜ್ಯಪಾಲ ತಾವರಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಎಚ್‍ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎಂಜಿನ್‍ಗಳ ಉತ್ಪಾದನೆ ಮತ್ತು ಜೋಡಣೆಗಾಗಿ ನಿರ್ಣಾಯಕವಾದ ಎಲ್ಲಾ ಉಪಕರಣಗಳು ಕಾರ್ಯಾರಂಭಗೊಂಡಿವೆ ಎಂದು ಎಚ್‍ಎಎಲ್‍ನ ಬೆಂಗಳೂರು ಪ್ರಧಾನ ಕಚೇರಿ ತಿಳಿಸಿದೆ. ಪೂರ್ವ ಉತ್ಪಾದನಾ ಚಟುವಟಿಕೆಗಳ ಭಾಗವಾಗಿ ಪ್ರಕ್ರಿಯೆ ಮತ್ತು ಗುಣಮಟ್ಟದ ಯೋಜನೆಗಳ ಹಾಗೂ ರೇಖಾಚಿತ್ರಗಳ ತಯಾರಿಕೆಯನ್ನು ಪೂರ್ಣಗೊಂಡಿದೆ. 2023ರ ಮಾರ್ಚ್ ವೇಳೆಗೆ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಎಚ್‍ಎಎಲ್ ತಿಳಿಸಿದೆ.

ಎಚ್‍ಎಎಲ್ ಏರೋಸ್ಪೇಸ್ ವಿಭಾಗ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‍ಎಲ್‍ವಿ), ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‍ಎಲ್‍ವಿ ಎಂಕೆ-2) ಜಿಎಸ್‍ಎಲ್‍ವಿ ಎಂಕೆ-3ಕ್ಕಾಗಿ ಏಕೀಕೃತ ತೈಲ ಸಂಗ್ರಹದ ಟ್ಯಾಂಕ್‍ಗಳನ್ನು ಉತ್ಪಾದನೆ ಆರಂಭಿಸಲಾಗಿದೆ. ಜೊತೆಗೆ ಉಡಾವಣಾ ವಾಹನ ರಚನೆಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಈ ಮೂಲಕ ಐಸಿಎಂಎಫ್ ರಾಕೆಟ್ ಎಂಜಿನ್‍ಗಳ ಎಲ್ಲಾ ಭಾಗಗಳನ್ನು ಒಂದೇ ಸೂರಿನಡಿ ತಯಾರಿಸಿ ಪೂರೈಸಲಿದೆ. ಆತ್ಮನಿರ್ಬರ ಭಾರತದ ಭಾಗವಾಗಿ ಹೈ-ಥ್ರಸ್ಟ್ ರಾಕೆಟ್ ಎಂಜಿನ್‍ಗಳ ತಯಾರಿಕೆಯಲ್ಲಿ ದೇಶದ ಸ್ವಾವಲಂಬನೆ ಹೆಚ್ಚಾಗಲಿದೆ ಎಂದು ಎಚ್‍ಎಎಲ್ ತಿಳಿಸಿದೆ.

ಉಪಗ್ರಹ ಉಡಾವಣಾ ವಾಹನಗಳಲ್ಲಿ ಕ್ರಯೋಜೆನಿಕ್ ಎಂಜಿನ್‍ಗಳನ್ನು ವಿಶ್ವಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ. ಸಂಕೀರ್ಣ ಸ್ವರೂಪ ಹೊಂದಿರುವ ಇವುಗಳ ಉತ್ಪಾದನೆಯ ತಂತ್ರಜ್ಞಾನವನ್ನು ಈವರೆಗೆ ಅಮೆರಿಕಾ, ಫ್ರಾನ್ಸ್, ಜಪಾನ್, ಚೀನಾ ಮತ್ತು ರಷ್ಯಾ ದೇಶಗಳು ಮಾತ್ರ ಕರಗತ ಮಾಡಿಕೊಂಡಿವೆ. 2014ರ ಜನವರಿ 5ರಂದು ಭಾರತವು ಕ್ರಯೋಜೆನಿಕ್ ಎಂಜಿನ್‍ನ ಜಿಎಸ್‍ಎಲ್‍ವಿ-ಡಿ5 ಯಶ್ವಿಸಿ ಹಾರಾಟ ನಡೆಸಿತ್ತು.

ಈ ಮೂಲಕ ಕ್ರಯೋಜೆನಿಕ ಉತ್ಪಾದನೆಯಲ್ಲಿ ಭಾರತ ಆರನೇ ದೇಶವಾಗಿದೆ. ಖಾಸಗಿ ಕಂಪೆಡನಿಗಳ ಮೂಲಕ ಇಸ್ರೋ ಈ ಗುರಿಯನ್ನು ಸಾಸಿದೆ. ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಪರಿಶೋಧನೆ ಕ್ರಯೋಜೆನಿಕ್ ತಂತ್ರಜ್ಞಾನ ಆಧಾರಿತವಾಗಿರಲಿದೆ ಎಂದು ಎಚ್‍ಎಎಲ್ ತಿಳಿಸಿದೆ.

ಇದೇ ಸಂದರ್ಭದಲ್ಲಿ ರಾಷ್ಟ್ರಪತಿಯವರು ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ (ದಕ್ಷಿಣ ವಲಯ) ಸಂಸ್ಥೆ ಸ್ಥಾಪನೆಗೂ ಶಂಕು ಸ್ಥಾಪನೆ ನೇರವೇರಿಸಿದರು. ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್, ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.