ಕನ್ನಡ ರಾಜ್ಯೋತ್ಸವದಂದು ಯಶಸ್ವಿನಿ ಯೋಜನೆ ಮರು ಜಾರಿ : ಸಿಎಂ

ಬೆಂಗಳೂರು,ಅ.6- ಸಹಕಾರಿ ಸಂಸ್ಥೆಗಳ ಸದಸ್ಯರು ಹಾಗೂ ಅವರ ಕುಟುಂಬಸ್ಥರಿಗೆ ಆರೋಗ್ಯ ವಿಮೆ ಒದಗಿಸುವ ಯಶಸ್ವಿನಿ ಯೋಜನೆಯನ್ನು ನ.1ರ ಕನ್ನಡ ರಾಜ್ಯೋತ್ಸವದಂದು ಮರು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ 50 ಹಾಸಿಗೆ ಸಾಮಥ್ರ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ಉಪ ಕೇಂದ್ರ ಹಾಗೂ ಇಂದಿರಾಗಾಂ ಮಕ್ಕಳ ಆರೋಗ್ಯ ಸಂಸ್ಥೆಯ ಮಕ್ಕಳ ತೀವ್ರ ನಿಗಾಘಟಕದ ಉಪ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಘೋಷಣೆ ಮಾಡಿರುವಂತೆ ನ.1ರಂದು ಯಶಸ್ವಿನಿ ಯೋಜನೆಯನ್ನು ಮರು ಸ್ಥಾಪನೆ ಮಾಡಲಾಗುವುದು. ಇದರಿಂದ ಲಕ್ಷಾಂತರ ಜನರು ಲಾಭ ಪಡೆಯಲಿದ್ದಾರೆ. ಇದಕ್ಕೆ ಬೇಕಾದ ಅಗತ್ಯ ಸಿದ್ಧತೆಯನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.
ನಮ್ಮ ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ವಿಶೇಷ ಆದ್ಯತೆ ಕೊಟ್ಟಿದೆ. ಪ್ರಸಕ್ತ ವರ್ಷ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೇಂದ್ರ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುತ್ತೇವೆ. 6 ಕಮಾಂಡ್ ಸೆಂಟರ್, 80 ಪಿಎಚ್‍ಸಿ ಕೇಂದ್ರಗಳನ್ನು ತೆರೆಯುವುದಾಗಿ ಪ್ರಕಟಿಸಿದರು.
ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣಾ ಕೇಂದ್ರ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಎಲ್ಲಾ ಬಡವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಉಚಿತವಾಗಿ ನಡೆಸಲಾಗುವುದು. 500 ಕೋಟಿ ರೂ. ವೆಚ್ಚದಲ್ಲಿ ಕಿವಿಗಳಿಗೆ ನೀಡುವ ಯಂತ್ರಗಳನ್ನು ಸಹ ನೀಡುತ್ತೇವೆ. ಇದು ನಮ್ಮ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವ ಪ್ರಮುಖ ಆದ್ಯತೆ ಎಂದರು.
ಆರೋಗ್ಯದ ಜತೆ ಶಿಕ್ಷಣಕ್ಕೂ ಒತ್ತು ನೀಡಲಾಗಿದೆ. 4 ಸಾವಿರ ಅಂಗನವಾಡಿ ಕೇಂದ್ರಗಳನ್ನು ಈ ವರ್ಷವೇ ಪ್ರಾರಂಭಿಸುತ್ತೇವೆ. ಎಷ್ಟೋ ಬಡ ಹೆಣ್ಣುಮಕ್ಕಳು ಶಾಲೆಗಳಲ್ಲಿ ಶೌಚಾಲಯ ಇರುವುದಿಲ್ಲ ಎಂಬ ಕಾರಣಕ್ಕೆ ಶಾಲೆಗೆ ಬರಲು ಹಿಂದು-ಮುಂದು ನೋಡುತ್ತಾರೆ. ಆ.15ರೊಳಗೆ ಎಲ್ಲಾ ಶಾಲೆಗಳಿಗೂ ಶೌಚಾಲಯಗಳನ್ನು ತೆರೆಯಲಾಗುವುದು ಎಂದು ವಿವರಿಸಿದರು.
ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ಮಾಶಾಸನವಾಗಿ 3ಸಾವಿರ ಪರಿಹಾರ ನೀಡಲಾಗುತ್ತಿತ್ತು. ಇದನ್ನು 10ಸಾವಿರಕ್ಕೆ ನಮ್ಮ ಸರ್ಕಾರ ಹೆಚ್ಚಿಸಿದೆ. ಹೀಗೆ ಪ್ರತಿಯೊಬ್ಬರಿಗೂ ಸರ್ಕಾರದ ಸವಲತ್ತು ತಲುಪಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಮಲ್ಲೇಶ್ವರಂನಲ್ಲಿ ಟ್ರಾಮಾ ಸೆಂಟರ್ ತೆರೆಯಲು ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ. ಇದು ನಗರದ ಕೇಂದ್ರ ಭಾಗವಾಗಿರುವುದರಿಂದ ಅಗತ್ಯವೂ ಇದೆ. ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಈ ವರ್ಷವೇ ಅನುಮತಿ ನೀಡುವ ಕೆಲಸ ಮಾಡುತ್ತೇವೆ ಎಂದು ಸಿಎಂ ಆಶ್ವಾಸನೆ ನೀಡಿದರು.
ಮಲ್ಲೇಶ್ವರಂನಲ್ಲಿ ಜಯದೇವ ಆಸ್ಪತ್ರೆ ಉಪಕೇಂದ್ರ ಆರಂಭ ಮಾಡಿರುವುದು ಈ ಭಾಗದ ಜನತೆಗೆ ಅನುಕೂಲವಾಗಲಿದೆ. ರಾಷ್ಟ್ರೀಯ ಮಟ್ಟದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳು ಉತ್ತಮವಾದ ಕೆಲಸ ಮಾಡುತ್ತಿದೆ. ಇದಕ್ಕೆ ನಮ್ಮ ಸರ್ಕಾರ ಕೂಡ ಅಗತ್ಯವಾದ ನೆರವು ನೀಡುತ್ತದೆ. ಶಿಕ್ಷಕರು, ವೈದ್ಯರು, ಪೊಲೀಸರು, ಚಾಲಕರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ.
ವೈಟ್ ಕಾಲರ್‍ಗಳಿಗಿಂತ ಬ್ಲ್ಯೂಕಾಲರ್‍ಗಳು ಕೆಲಸ ಮಾಡುತ್ತಿವೆ ಎಂದು ಬಸವರಾಜ ಬೊಮ್ಮಾಯಿ ಅವರು ಹಾಸ್ಯ ಚಟಾಕಿ ಹಾರಿಸಿದರು.
ಸಮಾರಂಭದಲ್ಲಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಡಾ.ಕೆ.ಸುಧಾಕರ್, ಶಾಸಕ ದಿನೇಶ್ ಗುಂಡೂರಾವ್, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.