ನಾಡಿನ ಸಮಸ್ತ ಜನತೆಗೆ ದಸರಾ ಶುಭಾಶಯ ಕೋರಿದ ಸಿಎಂ ಬೊಮ್ಮಾಯಿ

ಬೆಂಗಳೂರು,ಅ.4- ನಾಡಹಬ್ಬ ದಸರಾ ರಾಜ್ಯದಲ್ಲಿ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ನೀಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಿನ ಸಮಸ್ತ ಜನತೆಗೆ ಶುಭ ಹಾರೈಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮತ್ತು ನಾಳೆ ದಸರಾ ಹಬ್ಬವಿದ್ದು, ಜನರು ನೆಮ್ಮದಿಯಿಂದ ಹಬ್ಬ ಆಚರಣೆ ಮಾಡಲಿ. ಕನ್ನಡ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ದುಷ್ಟರ ಶಿಕ್ಷೆಯಾಗಿ ಅವರು ನಿಗ್ರಹವಾಗಲಿ. ಶಿಷ್ಟರ ರಕ್ಷಣೆಯಾಗಲಿ. ನಾಡಿನಲ್ಲಿ ಶಾಂತಿ, ಸುಭಿಕ್ಷೆ ನೆಲೆಸಲಿ ಎಂದು ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಬಳಿ ಪ್ರಾರ್ಥಿಸುತ್ತೇನೆ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಆಶೀರ್ವಾದ ಮಾಡಲಿ ಎಂದು ಆಶಿಸಿದರು.
ಹಬ್ಬ ಇರುವ ಕಾರಣ ನಾನು ಯಾವುದೇ ರಾಜಕೀಯ ವಿಷಯಗಳನ್ನು ಮಾತನಾಡುವುದಿಲ್ಲ. ಪ್ರತಿಪಕ್ಷಗಳು ಏನೇ ಆರೋಪ ಮಾಡಿಕೊಳ್ಳಲಿ. ಗುರುವಾರ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.