ವೈಯಕ್ತಿಕ ದಾಖಲೆಗಿಂತ ತಂಡ ಗೆಲ್ಲುವುದು ಮುಖ್ಯ, ಕೊಹ್ಲಿ ವರ್ತನೆಗೆ ಭಾರಿ ಮೆಚ್ಚುಗೆ

ವಿರಾಟ್ ಕೊಹ್ಲಿ ಕೋಟ್ಯಂತರ ಜನರ ಹೃದಯ ಗೆದ್ದಿರುವ ಆಟಗಾರ. ವಿರಾಟ್ ಕೊಹ್ಲಿಯನ್ನು ಜನ ಯಾಕೆ ಅಷ್ಟು ಆರಾಧಿಸುತ್ತಾರೆ ಎನ್ನುವುದಕ್ಕೆ ಮತ್ತೊಂದು ಕಾರಣ ಸಿಕ್ಕಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ವಿರಾಟ್ ಕೊಹ್ಲಿ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ತಮ್ಮ ಅರ್ಧಶತಕ ಪೂರೈಸಲು ಕೇವಲ ಒಂದು ರನ್ ಗಳಿಸಬೇಕಿದ್ದರೂ ಕೂಡ ವಿರಾಟ್ ಕೊಹ್ಲಿ ವೈಯಕ್ತಿಕ ಸಾಧನೆಗೆ ಬೆಲೆ ಕೊಡದೆ, ದಿನೇಶ್ ಕಾರ್ತಿಕ್‌ಗೆ ಬೌಂಡರಿಗಳನ್ನು ಬಾರಿಸುವಂತೆ ಕೇಳಿಕೊಂಡರು. ತಾವು ಅರ್ಧಶತಕ ಗಳಿಸಲು ಸಿಂಗಲ್ ಗಳಿಸುವುದು ಬೇಡ ಎಂದ ಕೊಹ್ಲಿ ವರ್ತನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ವಿರಾಟ್ ಕೊಹ್ಲಿ 49 ರನ್ ಗಳಿಸಿದ್ದಾಗ ಕೊನೆಯ ಓವರ್ ನಲ್ಲಿ ದಿನೇಶ್ ಕಾರ್ತಿಕ್ ಕ್ರೀಸ್‌ನಲ್ಲಿದ್ದರು. ಮೊದಲನೇ ಬಾಲ್‌ನಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ಎಸೆತದಲ್ಲಿ ಬೌಂಡರಿ ಪಡೆದುಕೊಂಡರು. ಮೂರನೇ ಎಸೆತವನ್ನು ಬೀಟ್ ಮಾಡಿದ ದಿನೇಶ್ ಕಾರ್ತಿಕ್ ನಾಲ್ಕನೇ ಬಾಲ್‌ನಲ್ಲಿ ಭರ್ಜರಿ ಸಿಕ್ಸರ್ ಗಳಿಸಿದರು. ಈ ಸಮಯದಲ್ಲಿ ದಿನೇಶ್ ಕಾರ್ತಿಕ್ ಬಳಿಗೆ ಬಂದ ಕೊಹ್ಲಿ ತಮಗಾಗಿ ಸಿಂಗಲ್‌ಗೆ ಪ್ರಯತ್ನಿಸಿದಂತೆ ಸೂಚಿಸಿದರು. ಬೌಂಡರಿ ಹೊಡೆಯುವಂತೆ ಸನ್ನೆ ಮಾಡಿದರು.
1 ರನ್‌ಗಳಿಂದ ಅರ್ಧಶತಕ ವಂಚಿತ ವಿರಾಟ್
ಸೂರ್ಯಕುಮಾರ್ ಜೊತೆ ಉತ್ತಮ ಜೊತೆಯಾಟ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಕೊನೆಯವರೆಗೂ ಅಜೇಯರಾಗಿ ಉಳಿದರು. ಅಂತಿಮ ಓವರ್ ಗಳಲ್ಲಿ ಆರ್ಭಟಿಸಿದ ಕೊಹ್ಲಿ, 28 ಎಸೆತಗಳನ್ನು ಎದುರಿಸಿ 7 ಬೌಂಡರಿ 1 ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು. ಅಂತಿಮ ಓವರ್ ನಲ್ಲಿ ಡಿಕೆ ಅಬ್ಬರಿಸಿ 7 ಎಸೆತಗಳಲ್ಲಿ ಎರಡು ಸಿಕ್ಸರ್, ಒಂದು ಬೌಂಡರಿ ನೆರವಿನಿಂದ 17 ರನ್ ಗಳಿಸಿದರು.
ತಂಡಕ್ಕಾಗಿ ರನ್ ಗಳಿಸುವಂತೆ ದಿನೇಶ್ ಕಾರ್ತಿಕ್‌ಗೆ ಹುರಿದುಂಬಿಸುವ ಮೂಲಕ ತಮ್ಮ ಅರ್ಧಶತಕವನ್ನು ತಪ್ಪಿಸಿಕೊಂಡರು. ಅಂತಿಮವಾಗಿ ಟೀಂ ಇಂಡಿಯಾ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 237 ರನ್ ಗಳಿಸಿತು.
ಉತ್ತಮ ಆರಂಭ ಪಡೆದ ಟೀಂ ಇಂಡಿಯಾ
ಆರಂಭಿಕರಾದ ಕೆಎಲ್ ರಾಹುಲ್ (28 ಎಸೆತಗಳಲ್ಲಿ 57) ಮತ್ತು ರೋಹಿತ್ ಶರ್ಮಾ (37 ಎಸೆತಗಳಲ್ಲಿ 43) ಮೊದಲ ವಿಕೆಟ್‌ಗೆ ಕೇವಲ 10 ಓವರ್‌ಗಳಲ್ಲಿ 96 ರನ್ ಸೇರಿಸುವ ಮೂಲಕ ಮೆನ್ ಇನ್ ಬ್ಲೂ ಇನ್ನಿಂಗ್ಸ್‌ಗೆ ಮೊದಲು ಉತ್ತಮ ಆರಂಭವನ್ನು ಪಡೆದರು. ರಾಹುಲ್ ಐದು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ಗಳನ್ನು ಹೊಡೆದರು, ಭಾರತದ ನಾಯಕ ರೋಹಿತ್ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸುವ ಮೂಲಕ ಉತ್ತಮ ಬ್ಯಾಟಿಂಗ್ ಮಾಡಿದರು.
ಸೂರ್ಯಕುಮಾರ್ ಯಾದವ್ ಕೇವಲ 22 ಎಸೆತಗಳಲ್ಲಿ ಅದ್ಭುತ 61 ರನ್ ಗಳಿಸಿ ಭಾರತದ ಪರ ಮತ್ತೊಮ್ಮೆ ಗರಿಷ್ಠ ಸ್ಕೋರ್ ಮಾಡಿದರು. ಅವರು 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಐದು ಬೌಂಡರಿಗಳು ಮತ್ತು ಸಿಕ್ಸರ್‌ಗಳನ್ನು ಸಿಡಿಸಿದ ಅವರು ರನೌಟ್‌ಗೆ ಬಲಿಯಾದರು. ಟೀಂ ಇಂಡಿಯಾ ಅಂತಿಮವಾಗಿ 3 ವಿಕೆಟ್ ಕಳೆದುಕೊಂದು 237 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 3 ವಿಕೆಟ್ ಕಳೆದುಕೊಂಡು 221 ರನ್ ಗಳಿಸಲು ಮಾತ್ರ ಶಕ್ತವಾಯಿತು. ಈ ಮೂಲಕ ಟೀಂ ಇಂಡಿಯಾ 16 ರನ್‌ಗಳ ಜಯ ಸಾಧಿಸಿ 2-0 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿದೆ.
ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್
ಭಾರತ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಅರ್ಷದೀಪ್ ಸಿಂಗ್.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ.