ಒಂದಿಬ್ಬರಿಂದ ರಾಜ್ಯ ಬಿಜೆಪಿಯಲ್ಲಿ ಗೊಂದಲ ಸೃಷ್ಟಿ; ರೇಣುಕಾಚಾರ್ಯ

ದಾವಣಗೆರೆ, ಜೂನ್ 16: "ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂಬುದಾಗಿ ಈಗಾಗಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಒಂದಿಬ್ಬರು ಗೊಂದಲ ಸೃಷ್ಟಿ ಮಾಡಿಸುತ್ತಿದ್ದು, ಇದಕ್ಕೆಲ್ಲಾ ಅರುಣ್ ಸಿಂಗ್ ತೆರೆ ಎಳೆಯಲಿದ್ದಾರೆ,'' ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಮಾತನಾಡಿದ ಅವರು, "ಬಿಜೆಪಿ ಶಿಸ್ತಿನ ಪಕ್ಷ. ವರಿಷ್ಠರು ಹೇಳಿದ ಮೇಲೆ ಸುಮ್ಮನಿರಬೇಕು. ಅದನ್ನು ಬಿಟ್ಟು ಫ್ಲೈಟ್ ಹತ್ತಿ ದೆಹಲಿಗೆ ಕೆಲವರು ಹೋಗ್ತಾರೆ, ಸಹಜವಾಗಿಯೇ ಸಮಯ ನೀಡುತ್ತಾರೆ. ಅದಕ್ಕೆ ಬಣ್ಣ ಕಟ್ಟುವುದು ಬೇಡ. ರಾಷ್ಟ್ರ ಹಾಗೂ ರಾಜ್ಯದಲ್ಲಿ ನಾಯಕತ್ವ ಬಲಿಷ್ಠವಾಗಿದೆ, ದುರ್ಬಲ ಆಗಿಲ್ಲ,'' ಎಂದು ಹೇಳಿದರು.
"ನಾನು ಹಾಗೂ 25 ಶಾಸಕರು ಸೇರಿ 65 ಶಾಸಕರ ಸಹಿ ಸಂಗ್ರಹ ಮಾಡಿರುವುದು ನಿಜ. ಯಡಿಯೂರಪ್ಪರ ನಾಯಕತ್ವ ಮೇಲೆ ನಮಗೆಲ್ಲಾ ನಂಬಿಕೆ ಇದೆ. ಯಾರು ಆಟ ಆಡ್ತಾರೋ ಅಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು ಸತ್ಯ. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್, ರಾಷ್ಟ್ರೀಯ ನಾಯಕರು ಹೇಳಿದ ಕಾರಣಕ್ಕೆ ಸಹಿ ಸಂಗ್ರಹ ನಿಲ್ಲಿಸಲಾಗಿದೆ. ನಿನ್ನೆ ಮೊನ್ನೆ ಬಂದವರು ನಾಯಕತ್ವ ಬದಲಾವಣೆ ಬಗ್ಗೆ ಮಾತಾಡ್ತಾರೆ,'' ಎಂದು ಯಾರ ಹಸರು ಹೇಳದೆ ಪರೋಕ್ಷವಾಗಿ ಕಿಡಿಕಾರಿದರು.
"ರಾಜಕಾರಣ ಮಾಡುವ ಸಮಯ ಇದಲ್ಲ. ಈ ಬಗ್ಗೆ ನನ್ನನ್ನು ಸೇರಿ ಯಾರೂ ಮಾಡಬಾರದು. ಆದರೆ, ಈಗ ರಾಜಕಾರಣದ ಬಗ್ಗೆ ಮಾತನಾಡಲು ಹೇಸಿಗೆ ಎನಿಸುತ್ತಿದೆ. ತಪ್ಪು ಮಾಡಿದವರ ವಿರುದ್ಧ ಗಂಭೀರವಾಗಿ ಕ್ರಮ ತೆಗೆದುಕೊಳ್ಳಬೇಕು," ಎಂದು ಆಗ್ರಹಿಸಿದರು.
"ನಾವೆಲ್ಲಾ ಒಂದಾಗಿದ್ದೇವೆ, ಯಡಿಯೂರಪ್ಪರ ಪರ ನಾವೆಲ್ಲರೂ ಇದ್ದೇವೆ ಎಂದು ಹೇಳಿದರಲ್ಲದೇ, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಒಂದಿಬ್ಬರು ಗೊಂದಲ ಸೃಷ್ಟಿ ಮಾಡ್ತಿದ್ದಾರೆ.''
"ನಾನು ನಮ್ಮ ಕ್ಷೇತ್ರದಲ್ಲಿ ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಇಲ್ಲೇ ವಾಸ್ತವ್ಯ ಮಾಡಿದ್ದೇನೆ. ಏನೇ ಸಮಸ್ಯೆ ಬಂದರೂ ಪರಿಹರಿಸುವ ಕೆಲಸ ಮಾಡುತ್ತಿದ್ದೇನೆ. ಕೊರೊನಾ ವಿರುದ್ಧ ಸಮರ ಸಾರಿ ಯಶಸ್ವಿಯಾಗಬೇಕಿದೆ,'' ಎಂದರು.
"ಇನ್ನು ಬಹಳಷ್ಟು ಶಾಸಕರು ಸಹಿ ಮಾಡುವವರಿದ್ದರು. ಸದ್ಯಕ್ಕೆ ಈಗ ಸಹಿ ಸಂಗ್ರಹ ಸ್ಥಗಿತಗೊಳಿಸಿದ್ದೇವೆ. ನಾಳೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಶಾಸಕರು ಅಭಿಪ್ರಾಯ ಹೇಳುತ್ತೇವೆ. ನಾನು ಯಾವುದೇ ಸಭೆ ಮಾಡಲ್ಲ, ಪರ ವಿರೋಧ ಬಣ ಇಲ್ಲ. ನಾವೆಲ್ಲರೂ ಒಂದೇ. ಪಕ್ಷ ಹಾಗೂ ನಾಯಕತ್ವ ವಿರೋಧಿ ಹೇಳಿಕೆ ನೀಡುವವರಿಗೆ ತಕ್ಕ ಶಾಸ್ತಿ ಆಗಬೇಕು. ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುವುದಾಗಿ'' ತಿಳಿಸಿದರು.