೪೯.೩೧ ಕೋಟಿ ರೂ. ಸಾರಿಗೆ ಸಿಬ್ಬಂದಿ ವೇತನ ಬಿಡುಗಡೆ

೪೯.೩೧ ಕೋಟಿ ರೂ. ಸಾರಿಗೆ ಸಿಬ್ಬಂದಿ ವೇತನ ಬಿಡುಗಡೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿಯ ಜುಲೈ ತಿಂಗಳ ವೇತನಕ್ಕಾಗಿ ರಾಜ್ಯ ಸರ್ಕಾರ ೪೯.೩೧ ಕೋಟಿ ರೂ. ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಬಿಎಂಟಿಸಿಯ ಅಧಿಕಾರಿ ಮತ್ತು ಸಿಬ್ಬಂದಿಯ ಜುಲೈ ತಿಂಗಳ ವೇತನ ವೆಚ್ಚಕ್ಕಾಗಿ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಶೇ.೫೦ರಷ್ಟು ಮೊತ್ತವನ್ನು ಸಾರಿಗೆ ಇಲಾಖೆ ಬಿಡುಗಡೆ ಮಾಡಿ ಆದೇಶಿಸಿದೆ.
ಆರ್ಥಿಕ ಇಲಾಖೆಯು ಇದಕ್ಕಾಗಿ ೪೯೩೧ ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಿದೆ. ಕೋವಿಡ್ ಎರಡನೇ ಅಲೆಯ ತೀವ್ರತೆಯಿಂದಾಗಿ ಬಿಎಂಟಿಸಿಯ ಆದಾಯ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹವಾಗದ ಹಿನ್ನೆಲೆಯಲ್ಲಿ ವೇತನ ಪಾವತಿ ಮಾಡಲು ಅಗತ್ಯವಿರುವ ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.
ಏಪ್ರಿಲ್, ಮೇ, ಜೂನ್ ತಿಂಗಳ ವೇತನಕ್ಕಾಗಿ ಕೆಎಸ್‌ಆರ್‌ಟಿಸಿಗೆ ೧೫,೨೬೪ ಲಕ್ಷ ರೂ. , ಬಿಎಂಟಿಸಿಗೆ ೧೪,೭೯೩ ಲಕ್ಷ ರೂ. , ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ೯,೯೬೩ ಲಕ್ಷ ರೂ. ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ೮,೭೩೦ ಲಕ್ಷ ರೂ. ಸೇರಿದಂತೆ ನಾಲ್ಕೂ ಸಂಸ್ಥೆಗಳಿಗೆ ಒಟ್ಟು ೪೮,೭೫೦ ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು ಎಂದು ಸಾರಿಗೆ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.