'ಕಾಂತಾರ' ಹಿಂದಿ ಓಟಿಟಿ ರಿಲೀಸ್ ಡೇಟ್ಸ್ ಫಿಕ್ಸ್: ನೆಟ್‌ಫ್ಲಿಕ್ಸ್ ಮೂಲಕ ಜಗತ್ತಿನ ಮೂಲೆ ಮೂಲೆಗೆ ಶಿವನ ಕಥೆ

'ಕಾಂತಾರ' ಹಿಂದಿ ಓಟಿಟಿ ರಿಲೀಸ್ ಡೇಟ್ಸ್ ಫಿಕ್ಸ್: ನೆಟ್‌ಫ್ಲಿಕ್ಸ್ ಮೂಲಕ ಜಗತ್ತಿನ ಮೂಲೆ ಮೂಲೆಗೆ ಶಿವನ ಕಥೆ

'ಕಾಂತಾರ' ದಾಖಲೆಗಳ ಪರ್ವ ಮುಂದುವರೆದಿದೆ. ಈಗಾಗಲೇ ಕನ್ನಡ, ತೆಲುಗು, ತಮಿಳು, ಮಲಯಾಳಂ ವರ್ಷನ್ ಓಟಿಟಿಗೆ ಬಂದು ಸದ್ದು ಮಾಡ್ತಿದೆ. ಆದರೂ ಥಿಯೇಟರ್‌ಗಳಲ್ಲಿ ಕಾಡುಬೆಟ್ಟು ಶಿವನ ಆರ್ಭಟ ಮುಂದುವರೆದಿದೆ. ಇದೀಗ 'ಕಾಂತಾರ' ಹಿಂದಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುವ ಸಮಯ ಹತ್ತಿರ ಬಂದಿದೆ. ಸೆಪ್ಟೆಂಬರ್ 30ಕ್ಕೆ ತೆರೆಗಪ್ಪಳಿಸಿದ 'ಕಾಂತಾರ' ಸಿನಿಮಾ 400 ಕೋಟಿ ರೂ. ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. 2 ವಾರಗಳ ನಂತರ ಬೇರೆ ಭಾಷೆಗಳಿಗೂ ಡಬ್ ಆಗಿ ಸಿನಿಮಾ ಸೂಪರ್ ಹಿಟ್ ಆಗಿತ್ತು. 'ಕಾಂತಾರ' ಹಿಂದಿ ವರ್ಷನ್‌ಗೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಬಾಲಿವುಡ್‌ನಲ್ಲಿ ಸಿನಿಮಾ 50 ದಿನ ಪೂರೈಸಿ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದೆ. ಇಂತಹ ಸಮಯದಲ್ಲೇ ಚಿತ್ರವನ್ನು ಓಟಿಟಿ ಫ್ಲಾಟ್‌ಫಾರ್ಮ್‌ಗೆ ತರುವ ಪ್ರಯತ್ನ ಶುರುವಾಗಿದೆ.

'ಕಾಂತಾರ' ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಬಿಟೌನ್ ಸೂಪರ್ ಸ್ಟಾರ್‌ಗಳ ಸಿನಿಮಾಗಳಿಗೂ ಪೈಪೋಟಿ ನೀಡಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸಿನಿಮಾ ನೋಡಿದ ಪ್ರತಿಯೊಬ್ಬರು ಚಿತ್ರತಂಡದ ಶ್ರಮಕ್ಕೆ ಬಹುಪರಾಕ್ ಹೇಳಿದ್ದರು.


ನೆಟ್‌ಫ್ಲಿಕ್ಸ್‌ನಲ್ಲಿ 'ಕಾಂತಾರ' ಹವಾ

'ಕಾಂತಾರ' ಚಿತ್ರದ 4 ವರ್ಷನ್ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗ್ತಿದೆ. ಆದರೆ ಆದರೆ ಹಿಂದಿ ವರ್ಷನ್ ಮಾತ್ರ ಡಿಸೆಂಬರ್ 9ಕ್ಕೆ ನೆಟ್‌ಫ್ಲಿಕ್ಸ್‌ಗೆ ಬರ್ತಿದೆ. ಹಿಂದಿಗೆ ಡಬ್ ಆಗಿ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಡುತ್ತಿರುವ ಮೊದಲ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಕಾಂತಾರ' ಪಾತ್ರವಾಗ್ತಿದೆ. ನೆಟ್‌ಫ್ಲಿಕ್ಸ್‌ ಮೂಲಕ ಪ್ರಪಂಚದ ಮೂಲೆ ಮೂಲೆಗೆ ಕರಾವಳಿ ಮಣ್ಣಿನ ಕಥೆ ತಲುಪಲಿದೆ.

ಹಿಂದಿ ಬೆಲ್ಟ್‌ನಲ್ಲಿ ₹80 ಕೋಟಿ ಗಳಿಕೆ

ಪ್ರೇಕ್ಷಕರ ಒತ್ತಾಯದ ಮೇರೆಗೆ ಅಕ್ಟೋಬರ್ 14ಕ್ಕೆ 'ಕಾಂತಾರ' ಹಿಂದಿ ವರ್ಷನ್ ತೆರೆಗೆ ಬಂದಿತ್ತು. ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆದಿತ್ತು. ನೋಡ ನೋಡುತ್ತಲೇ ಸಿಕ್ಕಾಪಟ್ಟೆ ಸ್ಟ್ರಾಂಗ್‌ ಆಗಿ ಥಿಯೇಟರ್‌ಗಳಲ್ಲಿ ಉಳಿದುಕೊಂಡಿತ್ತು. ಮೀಡಿಯಂ ಬಜೆಟ್ ಸಿನಿಮಾವೊಂದು ಅದರಲ್ಲೂ ಕನ್ನಡ ಸಿನಿಮಾ ಡಬ್ ವರ್ಷನ್ ಈ ಪಾಟಿ ಸದ್ದು ಮಾಡಿದ್ದು ಬಾಲಿವುಡ್ ಬಾಕ್ಸಾಫೀಸ್‌ ಪಂಡಿತರಿಗೂ ಅಚ್ಚರಿ ತಂದಿತ್ತು. ಸಿನಿಮಾ 80 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

8ನೇ ವಾರವೂ ಹಿಂದಿ ವರ್ಷನ್ ಆರ್ಭಟ

ಈಗಾಗಲೇ 'ಕಾಂತಾರ' ಹಿಂದಿ ವರ್ಷನ್ ಕೂಡ 50 ದಿನ ಪೂರೈಸಿದೆ. ಆದರೂ ಕೂಡ ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ಇನ್ನು ಪ್ರದರ್ಶನವಾಗುತ್ತಲೇ ಇದೆ. ಕನ್ನಡ ಚಿತ್ರವೊಂದಕ್ಕೆ ಈ ರೀತಿ ರೆಸ್ಪಾನ್ಸ್ ಸಿಗುತ್ತಿರುವುದು ಇದೇ ಮೊದಲು. KGF- 2 ಸಿನಿಮಾ ಕೂಡ ಓಟಿಟಿಗೆ ಬರುತ್ತಿದ್ದಂತೆ ಥಿಯೇಟರ್‌ಗಳಲ್ಲಿ ಪ್ರದರ್ಶನ ನಿಲ್ಲಿಸಿತ್ತು. ಆದರೆ 'ಕಾಂತಾರ' ಓಟಿಟಿ ರಿಲೀಸ್ ಡೇಟ್ ಹತ್ತಿರವಾದರೂ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ.

'ವರಾಹ ರೂಪಂ' ಸಾಂಗ್ ವಾಪಸ್ ಚಿತ್ರದ 'ವರಾಹ ರೂಪಂ' ಹಾಡಿನ ಕುರಿತು ಕೇರಳದ ಕೋರ್ಟ್​ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿದ್ದು, ಹಾಡು ಮತ್ತೆ ವಾಪಸ್ ಬಂದಿದೆ. ಥಿಯೇಟರ್‌ಗಳಲ್ಲಿ, ಯೂಟ್ಯೂಬ್‌ನಲ್ಲೂ, ಓಟಿಟಿಯಲ್ಲೂ ಮೊದಲು ಕಂಪೋಸ್ ಮಾಡಿದ್ದ ಒರಿಜಿನಲ್ ಸಾಂಗ್ ಪ್ರಸಾರವಾಗುತ್ತಿದೆ. ಇದು ಸಹಜವಾಗಿಯೇ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.