ಸುರತ್ಕಲ್: ಅರ್ಧಕ್ಕೇ ಬಾಕಿಯಾಯ್ತು ಕೂಳೂರು ಹೊಸ ಸೇತುವೆ!

ಸುರತ್ಕಲ್: ಕೂಳೂರು ಹಳೆಯ ಕಮಾನು ಸೇತುವೆ ತೀರಾ ಹದಗೆಟ್ಟಿದ್ದು ಅದರ ಪಕ್ಕದಲ್ಲೇ ನೂತನ ಸೇತುವೆ ಕಾಮಗಾರಿಯನ್ನು ಕೆಲವು ತಿಂಗಳ ಹಿಂದೆ ಪ್ರಾರಂಭಿಸಲಾಗಿತ್ತು. ಆದರೆ ಈಗ ಕಾಮಗಾರಿ ತಿಂಗಳಿಂದ ಸದ್ದಿಲ್ಲದೇ ನಿಂತಿದ್ದು ಅರ್ಧಕ್ಕೇ ಬಾಕಿಯಾಗಿದದ್ದೇಕೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡತೊಡಗಿದೆ.
ಕೂಳೂರು ಹಳೆಯ ಸೇತುವೆ ಇಕ್ಕೆಲಗಳು ಮುರಿದುಬಿದ್ದು ಎಷ್ಟೋ ವರ್ಷಗಳು ಕಳೆದಿವೆ. ಇತ್ತೀಚಿಗೆ ಪಣಂಬೂರಿಗೆ ಪ್ರಧಾನಿ ಮೋದಿ ಬರುವ ಹಿನ್ನೆಲೆಯಲ್ಲಿ ಸೇತುವೆಯ ಮೇಲಿನ ಹೆದ್ದಾರಿಗೆ ಡಾಮರೀಕರಣ ಮಾಡಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಡಾಮರು ಕಿತ್ತೋಗಿದ್ದು ಜನರು ಆಕ್ರೋಶ ಹೊರಹಾಕಿದ್ದ ಪ್ರಸಂಗವೂ ನಡೆದಿತ್ತು. ಆ ಬಳಿಕ ಹೊಸ ಸೇತುವೆ ಕಾಮಗಾರಿ ಬಿರುಸು ಪಡೆದುಕೊಂಡಿದ್ದು ಈಗ ಕಾಮಗಾರಿಯನ್ನು ಸದ್ದಿಲ್ಲದೇ ನಿಲ್ಲಿಸಲಾಗಿದೆ. ಕೇವಲ ಪಿಲ್ಲರ್ ಕಾಮಗಾರಿ ಮಾತ್ರವೇ ನಡೆದಿದ್ದು ಪೂರ್ತಿಗೊಳ್ಳಲು ಇನ್ನೆಷ್ಟು ವರ್ಷ ಬೇಕು ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಪಂಪ್ ವೆಲ್ ಫ್ಲೈ ಓವರ್ ಕಥೆಯಂತಾದೀತೇ?
ಪಂಪ್ ವೆಲ್ ಫ್ಲೈ ಓವರ್ ನಿರ್ಮಾಣಕ್ಕೆ ಹತ್ತು ವರ್ಷಕ್ಕೂ ಹೆಚ್ಚು ದೀರ್ಘ ಸಮಯವನ್ನು ತೆಗೆದುಕೊಂಡಿದ್ದು ಈ ಹಿಂದೆ ಭಾರೀ ಟ್ರೋಲ್ ಗೆ ಕಾರಣವಾಗಿತ್ತು. ಈಗ ಕೂಳೂರು ಸೇತುವೆ ಕೂಡಾ ಹಾಗೆಯೇ ಆಗಲಿದೆಯೇ ಎಂದು ಬ್ಯಾನರ್ ಬರೆಸಿ ಅಲ್ಲಲ್ಲಿ ಹಾಕಲಾಗಿದೆ. ಕೂಳೂರು ಸೇತುವೆ ಕುಸಿದು ಬೀಳುವ ಮುನ್ನ ಕಾಮಗಾರಿ ತುರ್ತಾಗಿ ನಡೆಸಲು ಸಂಬಂಧಪಟ್ಟ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಸಂಸದರು ಗಮನಹರಿಸಬೇಕಾದ ಅಗತ್ಯವಿದೆ.