21 ವರ್ಷದ ಬಳಿಕ ಕೊಲ್ಲೂರು ಮೂಕಾಂಬಿಕೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ

ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇವಿಗೆ 21 ವರ್ಷಗಳ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಶಾಸ್ತ್ರದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಅಷ್ಟಬಂಧ ನಡೆಸಬೇಕು ಎಂದಿದ್ದರೂ ಅನಿವಾರ್ಯ ಕಾರಣಗಳಿಂದ ಕಳೆದ 21 ವರ್ಷಗಳಿಂದ ದೇವಸ್ಥಾನದಲ್ಲಿ ಬ್ರಹ್ಮಕಲಶ ನಡೆಯದಿರಲಿಲ್ಲ.
ಎ.30ರಿಂದ ಮೇ 11 ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಅಂದಾಜು 5 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದ್ದು, ದೇವಸ್ಥಾನದಿಂದ 2 ಕೋಟಿ ಬಳಸಿಕೊಳ್ಳಲು ಹಾಗೂ ಉಳಿದ 3 ಕೋಟಿಯನ್ನು ಭಕ್ತರಿಂದ ಸಂಗ್ರಹಿಸಿ ಖರ್ಚು ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಹೃದಯ ಭಕ್ತರ ಸಹಕಾರವನ್ನು ಕೋರಲಾಗಿದೆ.
1972 ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸುವಾಗ ದೇವಸ್ಥಾನದ ಪರಿವಾರ ದೇವರುಗಳಲ್ಲಿ ಪ್ರಮುಖವಾದ ವೀರಭದ್ರ ದೇವರ ಗುಡಿಯ ಜೀರ್ಣೋದ್ಧಾರ ಕಾರ್ಯ ನಡೆಸಲಾಗಿತ್ತು. 2002ರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕ್ಷೇತ್ರಕ್ಕೆ ನೂತನ ಶಿಲಾ ಮಹಾದ್ವಾರ, ಸ್ವಾಗತ ಗೋಪುರ ಹಾಗೂ ಸ್ವರ್ಣಲೇಪಿತ ಧ್ವಜಸ್ತಂಭ ಸಮರ್ಪಣೆ ನಡೆದಿತ್ತು. ಈ ಬಾರಿಯ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವದಲ್ಲಿ ವೀರಭದ್ರ ದೇವರ ನೂತನ ಶಿಲಾಮಯ ದೇವಸ್ಥಾನ ಹಾಗೂ ನೂತನ ಬ್ರಹ್ಮರಥ ಲೋಕಾರ್ಪಣೆಯಾಗಿರುವುದು ವಿಶೇಷವಾಗಿದೆ.