ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪ್ರತಿದಿನ ಮಧ್ಯಾಹ್ನ ಎಲ್ಲಿಗೆ ಹೋಗುತ್ತಿದ್ದರು: ಎಚ್‌ಡಿಕೆ ಪ್ರಶ್ನೆ

ಚಿಕ್ಕಮಗಳೂರು: ಸಿದ್ದರಾಮಯ್ಯ ಅವರು ಪದೇ ಪದೆ ಜೆಡಿಎಸ್ ಬಗ್ಗೆ ಮಾತನಾಡುತ್ತಾರೆ. ಅವರ ಅಧಿಕಾರವಧಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಎಲ್ಲಿಗೆ ಹೋಗಿತ್ತು ಗೊತ್ತಿದೆ. ಇದಕ್ಕೆ ಬಿಜೆಪಿ ಮಾತ್ರ ಕಾರಣವಲ್ಲ ನಿಮ್ಮ ಪಾಲು ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಪಂಚರತ್ನ ರಥಯಾತ್ರೆ ಹಿನ್ನೆಲೆಯಲ್ಲಿ ತೇಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಗೆ ಹೋಗುವ ಮುನ್ನಾ ಅವರ ಅವಧಿಯಲ್ಲಿ ಯೋಜನೆ ಜಾರಿ ಮಾಡಲಾಗಿತ್ತು. ಹಣ ಮಾತ್ರ ಇಟ್ಟಿರ ಲಿಲ್ಲ. ತಪ್ಪು ಸರಿಪಡಿಸಲು ಆಗದಂತಹ ಪರಿಸ್ಥಿತಿಗೆ ತಂದೊಡ್ಡಿದ್ದರು ಎಂದು ಟೀಕಿಸಿದರು.
ಸಮ್ಮಿಶ್ರ ಸರಕಾರದ ಅವಧಿಯಲ್ಲಿ ನಾನು ತಾಜ್ ವೆಸ್ಟ್ ಎಂಡ್ ಹೊಟೇಲ್‌ನಲ್ಲಿ ಕಾಲ ಕಳೆಯುತ್ತಿದ್ದೆ ಎಂದು ಪದೇ ಪದೆ ಹೇಳುತ್ತಿದ್ದರು. ಜನ ಸಂಪರ್ಕದಲ್ಲಿ ಇರುತ್ತಿದ್ದೆ. ದಿನಕ್ಕೆ ೧೦-೧೫ಸಭೆ ನಡೆಸುತ್ತಿದ್ದೆ . ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಧ್ಯಾಹ್ನ ವಿಧಾನಸೌಧ ಖಾಲಿ ಮಾಡಿ ಎಲ್ಲಿಗೆ ಹೋಗುತ್ತಿದ್ದರು ಎಂಬುದು ನನಗೆ ಗೊತ್ತು ಎಂದು ಕಿಡಿಕಾರಿದ ಅವರು, ನನಗೆ ಮನೆ ಕೊಡಲಿಲ್ಲ, ಚುನಾವಣೆಯಲ್ಲಿ ಜನ ತಿರಸ್ಕಾರ ಮಾಡಿದರೂ ಮನೆ ಬಳಸಿಕೊಂಡರು, ಕುಮಾರಕೃಪವನ್ನು ಹೇಗೆ ಬಳಸಿಕೊಂಡರು ಎಂಬುದು ಗೊತ್ತಿದೆ ಎಂದರು.
ಕುಮಾರಕೃಪವನ್ನು ನೀವು ಬಳಸಿ ಕೊಂಡರೆ ನಾನು ಎಲ್ಲಿರಬೇಕಿತ್ತು ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಶಾಸಕರಿಗೆ ೧೯ ಸಾವಿರ ಕೋಟಿ ರೂ. ಹಣ ನೀಡಿದ್ದಾರೆ. ಅದರ ದಾಖಲೆ ಬಿಡುಗಡೆಗೂ ನಾನು ಸಿದ್ಧ. ನಾನು ಅವರಿಂದ ಆಡಳಿತ ಕಲಿಯಬೇಕಿಲ್ಲ ಎಂದು ಸಿಡಿಮಿಡಿಗೊಂಡರು.
ಕುದುರೆ ಕೊಟ್ಟು ಕಾಲು ಕಟ್ಟು ಮಾಡಿ ಓಡಿಸು ಎಂದರೆ ಹೇಗೆ ಓಡಿ ಸುವುದು. ಜನರು ಎಲ್ಲರ ಆಡಳಿತ ವನ್ನು ನೋಡಿದ್ದಾರೆ. ಅಧಿಕಾರ ಇರಲಿ ಇಲ್ಲದಿರಲಿ ನನ್ನಷ್ಟು ಜನರನ್ನು ಯಾರು ನೋಡಿಲ್ಲ ಎಂದರು.
ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದಿರುವ ಸರಕಾರ ಶೇ.೧೭ರಷ್ಟು ವೇತನ ಹೆಚ್ಚಳ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಆದರೆ, ನೌಕರರಿಗೆ ನಂಬಿಕೆ ಬಂದಿಲ್ಲ. ದುಡ್ಡು ಎಲ್ಲಿದೆ, ಏನ್ ಮಾಡ್ತಾರೆ ಅಂತ ನೋಡೋಣ. ಬಜೆಟ್ ದಿನ ಘೋ ಷಣೆ ಮಾಡಿದ್ದರೆ ಇಷ್ಟೆಲ್ಲ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದರು.
ಜೆಡಿಎಸ್ ಎರಡು ಜಿಲ್ಲೆಗೆ ಸೀಮಿತ ಎಂದು ಬಿಜೆಪಿಯವರು ಹೇಳಿದ್ದು, ಅವರ ಭದ್ರಕೋಟೆಗಳು ಅಲುಗಾಡುತ್ತಿವೆ ಅವುಗಳನ್ನು ಭದ್ರ ಮಾಡಿಕೊಳ್ಳಲಿ. ಯಾವ ಬ್ರಹ್ಮಾಸ್ತ್ರವು ಜೆಡಿಎಸ್ ಭದ್ರಕೋಟೆ ಜಿಲ್ಲೆಗಳಲ್ಲಿ ನಡೆಯೋದಿಲ್ಲ ಎಂದರು.
ಹಿಂದೂ ಸಂಸ್ಕೃತಿ ವಿಚಾರದಲ್ಲಿ ಕೆಲವರು ಪಾಕಿಸ್ತಾನಕ್ಕೆ ಹೋಗಿ ಎಂಬ ಹೇಳಿಕೆ ನೀಡಿದ್ದನ್ನು ನೋಡಿದ್ದೇನೆ. ಹಿಂದೂ ಸಂಸ್ಕೃತಿ ಬಗ್ಗೆ ಏನೆಂದು ತಿಳಿದುಕೊಂಡಿದ್ದಾರೆ ಎಂದು ಪ್ರಶ್ನಿಸಿ ಕಾಂಗ್ರೆಸ್‌ನವರು ಕೈಯಲ್ಲಿ ಖಜಾನೆ ಯನ್ನು ಕೆರೆಯುತ್ತಿದ್ದರು. ಬಿಜೆಪಿ ಜೆಸಿಬಿ ಮೂಲಕ ಕೆರೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಜನರು ಎರಡು ರಾಷ್ಟ್ರೀಯ ಪಕ್ಷ ಗಳನ್ನು ಹೊರಗಿಡಲು ತೀರ್ಮಾನ ಮಾಡಿದ್ದಾರೆ. ಆದರೆ, ಪ್ರತಿಪಕ್ಷಗಳು ೨೦ಸ್ಥಾನ ಜೆಡಿಎಸ್ ಗೆಲ್ಲುತ್ತದೆ ಎನ್ನುತ್ತಿದ್ದರು. ಜನ ಬೆಂಬಲ ನೋಡಿದರೆ ಕಾಂಗ್ರೆಸ್ ಬಿಜೆಪಿಗಿಂತ ಒಂದು ಹೆಜ್ಜೆ ಮುಂದಿದ್ದೇವೆ ಅನಿಸುತ್ತಿದೆ. ನಾವು ಜನರನ್ನು ಕರೆಸುತ್ತಿಲ್ಲ ಜನರ ಬಳಿಗೆ ನಾವು ಹೋಗುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿ ಷತ್ ಸದಸ್ಯ ಎಸ್.ಎಲ್.ಬೋಜೇ ಗೌಡ, ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ, ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಉಪಸ್ಥಿತರಿದ್ದರು.