"ವಿರೋಧ ಪಕ್ಷದವರ ಮೇಲೆ ಮಾತ್ರ ಇಡಿ ಆದಾಯ ತೆರಿಗೆ ದಾಳಿ ನಡೆಯುತ್ತದೆ"

"ವಿರೋಧ ಪಕ್ಷದವರ ಮೇಲೆ ಮಾತ್ರ ಇಡಿ ಆದಾಯ ತೆರಿಗೆ ದಾಳಿ ನಡೆಯುತ್ತದೆ"

ಬೆಂಗಳೂರು: ಇಂದು ದೇಶದೆಲ್ಲೆಡೆ ವಿರೋಧ ಪಕ್ಷದವರ ಮೇಲೆ ಇಡಿ ಆದಾಯ ತೆರಿಗೆಯ ದಾಳಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ಎಚ್ ಎಂ.ರೇವಣ್ಣ ವಾಗ್ದಾಳಿ ನಡೆಸಿದರು.

ಈ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿದ ಅವರು "ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆನಂದ್ ಸಿಂಗ್ ಅವರು ಮಾಡಿರುವ ಕಾರ್ಯಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ ತಮ್ಮ ಆರೋಪಗಳ ಪಟ್ಟಿಯನ್ನು ಅವರು ವಿವರಿಸಿದರು.

ಬಿಜೆಪಿ ಅಧಿಕಾರಕ್ಕೆ ಬರಲು ಕೋಟ್ಯಂತರ ರೂಪಾಯಿ ಹಣ ಪಡೆದು ಪಕ್ಷಾಂತರ ಮಾಡಿ ಇಂದು ಸಚಿವರಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಮತ್ತೆ ತಮಗೆ ಜನ ದೇಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಹೊಸ ಪ್ರಯೋಗ ಮಾಡುತ್ತಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಬರುವ ಹೊಸಪೇಟೆ ನಗರಸಭೆ, ಕಮಲಾಪುರ ಪಟ್ಟಣ, ಹೊಸಪೇಟೆ ತಾಲೂಕು ಗ್ರಾಮ ಹಾಗೂ ಜಿಲ್ಲಾ ಪಂಚಾಯಿತಿಯ ಒಟ್ಟು 40 ಸದಸ್ಯರುಗಳಿಗೆ ದೀಪಾವಳಿ ಉಡುಗೊರೆ ಹೆಸರಿನಲ್ಲಿ 2,65,99,000 ನಗದು, ಪುರುಷರಿಗೆ ರೇಷ್ಮೆ ಪಂಚೆ, ಮಹಿಳೆಯರಿಗೆ ರೇಷ್ಮೆ ಸೀರೆ, ಬೆಳ್ಳಿ ನಾಣ್ಯ, ಒಂದು ಕೆಜಿ ಹಾಗೂ ಅರ್ಧ ಕೆಜಿ ಬೆಳ್ಳಿ ನೀಡಲಾಗಿದೆ.

ಹೊಸಪೇಟೆ ನಗರಸಭೆ ಸದಸ್ಯರಿಗೆ ತಲಾ 1 ಕೆಜಿ ಬೆಳ್ಳಿ, 1.44 ಲಕ್ಷ ನಗದು, ರೇಷ್ಮೆ ಪಂಚೆ ಹಾಗೂ ರೇಷ್ಮೆ ಸೀರೆ ನೀಡಲಾಗಿದ್ದು ಇದಕ್ಕಾಗಿ 79.60 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ.

ಕಮಲಾಪುರ ಪಟ್ಟಣ ಪಂಚಾಯಿತಿ ಸದಸ್ಯರಿಗೆ ತಲಾ 1/2 ಕೆಜಿ ಬೆಳ್ಳಿ, 1 ಲಕ್ಷ ನಗದು, ರೇಷ್ಮೆ ಸೀರೆ, ಪಂಚೆ, ಟವಲ್ ನೀಡಲಾಗಿದೆ. ಇದಕ್ಕಾಗಿ 35.65 ಲಕ್ಷ ವೆಚ್ಚ ಮಾಡಲಾಗಿದೆ.

ಹೊಸಪೇಟೆ ತಾಲೂಕಿನ ಗ್ರಾಮ ಪಂಚಾಯತಿ ಸದಸ್ಯರಿಗೆ ತಲಾ 1/2 ಕೆಜಿ ಬೆಳ್ಳಿ, 22,000 ನಗದು, ರೇಷ್ಮೆ ಸೀರೆ, ಪಂಚೆ, ಟವಲ್ ನೀಡಲಾಗಿದೆ. ಇದಕ್ಕಾಗಿ 1.40 ಕೋಟಿ ಖರ್ಚು ಮಾಡಲಾಗಿದೆ. ಒಟ್ಟಾರೆ ಈ ಮೂರು ಪಂಚಾಯತಿಗಳ ಸದಸ್ಯರಿಗೆ 2.65 ಕೋಟಿ ವೆಚ್ಚ ಮಾಡಲಾಗಿದೆ.ಇಷ್ಟೆಲ್ಲಾ ಕೊಡುಗೆ ನೀಡುವ ಕಾರ್ಯ ನೋಡಿದರೆ ಈ ರಾಷ್ಟ್ರದಲ್ಲಿ ಕೇವಲವಿತು ವಿರೋಧ ಪಕ್ಷದವರ ಮೇಲೆ ಮಾತ್ರ ಇಡಿ ಆದಾಯ ತೆರಿಗೆ ದಾಳಿ ನಡೆಯುತ್ತದೆ ಎಂದು ಖಚಿತವಾಗುತ್ತದೆ.

ಬಿಜೆಪಿ ನಾಯಕರಿಗೆ ಯಾವುದೇ ತನಿಖೆ ಇಲ್ಲವಾಗಿದೆ. ಇದು ಕೇವಲ ಒಂದು ಉದಾಹರಣೆಯಾಗಿದ್ದು ಸರ್ಕಾರದಲ್ಲಿರುವ ಅನೇಕ ಸಚಿವರು ಈ ರೀತಿ ಅಕ್ರಮಗಳನ್ನು ಎಸಗಿದ್ದಾರೆ.

ಇಂದು ಸರ್ಕಾರ ಎಲ್ಲಾ ಮಂತ್ರಿಗಳಿಗೆ ಗ್ರಾಮೋತ್ಸವ ಮಾಡಲು ಹೇಳುತ್ತಿದ್ದು ವಿಜಯನಗರದಲ್ಲಿ ಆನಂದ್ ಸಿಂಗ್ ಅವರ ಮಗ ಸಿದ್ದಾರ್ಥ್ ಸಿಂಗ್ ಅವರು ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಗ್ರಾಮ ವಾಸ್ತವ್ಯ ಮಾಡಿದ್ದಾರೆ ಅಲ್ಲಿರುವ ನ್ಯೂನ್ಯತೆ ಸಮಸ್ಯೆಗಳಿಗೆ ಪರಿಹಾರ ನೀಡಬಹುದು. ಆದರೆ ಸಚಿವರ ಮಗ ಗ್ರಾಮ ವಾಸ್ತವ್ಯ ಮಾಡಿದರೆ ಏನು ಮಾಡಲು ಸಾಧ್ಯ? ಎಂದು ಅವರು ಪ್ರಶ್ನಿಸಿದರು.