ಬೈಂದೂರು ಕ್ಷೇತ್ರದಲ್ಲಿ ಕೈ ಪಕ್ಷದಿಂದ ಗೋಪಾಲ ಪೂಜಾರಿ, ಬಿಜೆಪಿ ಗೊಂದಲದ ಗೂಡು

ಬೈಂದೂರು ಕ್ಷೇತ್ರದಲ್ಲಿ ಕೈ ಪಕ್ಷದಿಂದ ಗೋಪಾಲ ಪೂಜಾರಿ, ಬಿಜೆಪಿ ಗೊಂದಲದ ಗೂಡು

ಕುಂದಾಪುರ: ಕರಾವಳಿ ಮತ್ತು ಮಲೆನಾಡಿನ ಗ್ರಾಮಗಳನ್ನು ಹೊಂದಿರುವ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಸಮಬಲದ ಹೋರಾಟ ಕಂಡು ಬಂದಿದೆ. ಇಲ್ಲಿ ಮೂರನೇ ಪಕ್ಷದ ಅಭ್ಯರ್ಥಿಗಳು ಲೆಕ್ಕಕ್ಕೆ ಇಲ್ಲಾ ಎನ್ನುವಂತ ಪರಿಸ್ಥಿತಿ ಇದ್ದು ನಾಮ್‌ಕೆವಾಸ್ಥೆ ಮಾತ್ರ ಚುನಾವಣೆಯಲ್ಲಿ ನಿಲ್ಲಬೇಕಷ್ಟೆ.

ಏನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳದ್ದೆ ಅಬ್ಬರ.

ಕೈ- ಕಮಲ ಸೋಲು ಗೆಲುವಿನ ವಿವರ: 2008 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಗೋಪಾಲ ಪೂಜಾರಿ ಮತ್ತು ಬಿಜೆಪಿ ಪಕ್ಷದಿಂದ ಕೆ.ಲಕ್ಷೀನಾರಾಯಣ ಅವರ ನಡುವೆ ನಡೆದ ನೇರ ನೇರಾ ಪೈಪೋಟಿಯಲ್ಲಿ ಜಾತಿಯ ಬಲವಿಲ್ಲದಿದ್ದರೂ ಹಿಂದಿನ ಚುನಾವಣೆಗಳ ಸೋಲಿನಿಂದ ಕಂಗೆಟ್ಟಿದ್ದ ಕೆ.ಲಕ್ಷ್ಮೀ ನಾರಾಯಣ ಅವರು ಅನುಕಂಪದ ಅಲೆಯಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿ ವಿಧಾನ ಸೌಧವನ್ನು ಪ್ರವೇಶ ಮಾಡಿದ್ದರು.

ಬೈಂದೂರು ಕ್ಷೇತ್ರದಲ್ಲಿ ಸಮಬಲದ ಮತವನ್ನು ಹೊಂದಿರುವ ಬಂಟ ಮತ್ತು ಬಿಲ್ಲವ ಸಮುದಾಯದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಮಣೆ ಹಾಕಿದ್ದರ ಫಲದಿಂದ ಜಾತಿ ಲೆಕ್ಕಾಚಾರದಲ್ಲೆ ನಡೆದ 2013 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮತ್ತು ಬಿಜೆಪಿ ಪಕ್ಷದಿಂದ ಕೊಲ್ಲೂರು ದೇವಸ್ಥಾನದ ಮಾಜಿ ಧರ್ಮದರ್ಶಿ ಬಿ.ಎಂ ಸುಕುಮಾರ ಶೆಟ್ಟಿ ಅವರು ಸ್ಪರ್ಧಿಸಿದ್ದರು.

ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿ.ಎಂ ಸುಕುಮಾರ ಶೆಟ್ಟಿ ಅವರು ಕೆ.ಗೋಪಾಲ ಪೂಜಾರಿ ಎದುರು ಸೋಲು ಅನುಭವಿಸಿದರು.

2018 ರ ವಿಧಾನ ಸಭಾ ಚುನಾವಣೆಯಲ್ಲಿ ಬಂಟ ಸಮುದಾಯದಿಂದ ಬಿ.ಎಂ ಸುಕುಮಾರ ಶೆಟ್ಟಿ ಮತ್ತು ಬಿಲ್ಲವ ಸಮುದಾಯದಿಂದ ಕೆ.ಗೋಪಾಲ ಪೂಜಾರಿ ಅವರು ಮತ್ತೆ ಎದುರಾಳಿಗಳಾಗಿ ಚುನಾವಣೆ ಕಣದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದರು.

ಅಭಿವೃದ್ಧಿ ಕಾರ್ಯಗಳಿಂದ ಸುಲಭದ ಜಯವನ್ನು ಬಯಸಿದ್ದ ಕೆ.ಗೋಪಾಲ ಪೂಜಾರಿ ಅವರು ಮೋದಿ ಮೋಡಿ ಹಾಗೂ ಬಿಜೆಪಿಯ ಅಬ್ಬರದ ಅಲೆ ಮತ್ತು ಬಿ.ಎಂ ಸುಕುಮಾರ ಶೆಟ್ಟಿ ಅವರಿಗೆ ಜನರು ನೀಡಿದ ಬೆಂಬಲದಿಂದ 2018 ರ ಚುನಾವಣೆಯಲ್ಲಿ ಬಿ.ಎಂ ಸುಕುಮಾರ್ ಶೆಟ್ಟಿ ವಿರುದ್ಧ ಸೋಲನ್ನು ಒಪ್ಪಿಕೊಂಡರು.
ಎರಡನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿ.ಎಂ ಸುಕುಮಾರ್ ಶೆಟ್ಟಿ ಅವರು ಗೆಲುವನ್ನು ಕಂಡು ಕೊಳ್ಳುವುದರ ಮೂಲಕ ಮೊದಲ ಬಾರಿಗೆ ವಿಧಾನ ಸೌಧದ ಮೆಟ್ಟಿಲನ್ನು ಹತ್ತಿದ್ದರು.

ಮೂರನೇ ಅವಕಾಶಕ್ಕಾಗಿ ಬಿ.ಎಂ ಸುಕುಮಾರ ಶೆಟ್ಟಿ ಕಸರತ್ತು: ಹಿಂದುಳಿದ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವ ಬೈಂದೂರು ಕ್ಷೇತ್ರದ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಅವರು ಮೂರನೇ ಅವಕಾಶಕ್ಕಾಗಿ ಪಕ್ಷದ ವರಿಷ್ಠರ ಮುಖಾಂತರ ಕಸರತ್ತನ್ನು ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯಗಳು ಸಾಮಾಜಿಕ ವಲಯದಲ್ಲಿ ಕೇಳಿ ಬರುತ್ತಿದೆ ಹಾಲಿ ಶಾಸಕರಿಗೆ ಬಿ ಫಾರಂ ದೊರೆತರು ಅಚ್ಚರಿ ಇಲ್ಲ.

ಬೈಂದೂರು ಟಿಕೆಟ್‍ಗಾಗಿ ಬಿಜೆಪಿಯಲ್ಲಿ ಪೈಪೋಟಿ: ಬಣ ರಾಜಕೀಯದ ಬಿರುಗಾಳಿ ಎದ್ದಿರುವ ಬೈಂದೂರು ಬಿಜೆಪಿಯಲ್ಲಿ 2023 ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‍ಗಾಗಿ ಪೈಪೋಟಿ ನಡೆಯುತ್ತಿದೆ. ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಕ್ಷೇತ್ರದ ಹಾಲಿ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಉತ್ಸುಕರಾಗಿದ್ದಾರೆ. ಹಾಲಿ ಶಾಸಕರಿಗೆ ಟಕ್ಕರ್ ಕೊಡಲು ಬಿಜೆಪಿ ಪಕ್ಷದ ಮುಖಂಡೃಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಹೆಗ್ಡೆ,ಬೈಂದೂರು ಮಂಡಲದ ಬಿಜೆಪಿ ಮಾಜಿ ಅಧ್ಯಕ್ಷ ಪ್ರಣಯ್ ಕುಮಾರ್ ಶೆಟ್ಟಿ,ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ಗುರುರಾಜ ಶೆಟ್ಟಿ ಗಂಟಿಹೊಳೆ, ನಿತಿನ್ ನಾರಾಯಣ, ಡಾ.ಗೋವಿಂದ ಬಾಬು ಪೂಜಾರಿ ಅವರು ಟಿಕೆಟ್‍ಗಾಗಿ ಬಾರಿ ಹೋರಾಟದಲ್ಲಿ ನಿರತರಾಗಿದ್ದಾರೆ. ತಮ್ಮ ತಮ್ಮ ಅಭಿಮಾನಿಗಳ ಸಂಘದ ಮುಖೇನ ಸಾಮಾಜಿಕ ಜಾಲಾತಾಣಗಳಲ್ಲಿ ಪ್ರಚಾರವನ್ನು ಕೈಗೊಂಡಿದ್ದಾರೆ. ಇನ್ನೊಂದು ಕಡೆಯಲ್ಲಿ ಹಿರಿಯ ರಾಜಕಾರಣಿ ಬಿಜೆಪಿ ಪಕ್ಷದ ಮುಖಂಡರಾದ ಜಯಪ್ರಕಾಶ್ ಹೆಗ್ಡೆ ಅವರ ಹೆಸರು ಕೇಳಿ ಬರುತ್ತಿದ್ದು ಬೈಂದೂರು ಟಿಕೆಟ್ ಯಾರಿಗೆ ಎಂದು ಬಿಜೆಪಿ ಪಕ್ಷದಲ್ಲಿ ನಿರ್ಣಯಗೊಂಡಿಲ್ಲ.

ಕೆ.ಗೋಪಾಲ ಪೂಜಾರಿ ಬಿಜೆಪಿಗೆ ಎದುರಾಳಿ: ಬೈಂದೂರು ಕ್ಷೇತ್ರದಲ್ಲಿ 4 ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು 2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಎದುರಾಳಿ ಆಗಿ ಚುನಾವಣಾ ಅಖಾಡದಲ್ಲಿ ಸ್ಪರ್ಧಿಸಲು ಅಣಿಯಾಗಿದ್ದಾರೆ. ಈಗಾಗಲೇ ಪಕ್ಷದ ಕಾರ್ಯಕರ್ತರ ಮೂಲಕ ಪ್ರಚಾರದ ಕೆಲಸದಲ್ಲಿ ನಿರತರಾಗಿದ್ದಾರೆ.

ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ: ಬಿಜೆಪಿ ಟಿಕೆಟ್ ಯಾರಿಗೆಂದು ಕನ್‍ಫಾರ್ಮ್ ಆಗದೆ ಒಂದಿಷ್ಟು ಆಕಾಂಕ್ಷಿಗಳು ತಮ್ಮ ಅಭಿಮಾನಿಗಳ ಸಂಘದ ಮುಖಾಂತರ ತಮಗೆ ಟಿಕೆಟ್ ಆಗಿದೆ ಎನ್ನುವ ಮಾತುಗಳನ್ನು ಹೊರಬಿಟ್ಟಿದ್ದಾರೆ, ಸಾಮಾಜಿಕ ಜಾಲಾತಾಣಗಳಲ್ಲಿ ಅಭಿಮಾನಿಗಳಿಂದ ಭರ್ಜರಿ ಬ್ಯಾಟಿಂಗ್ ಕೂಡ ಮಾಡಿಸುತ್ತಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಕಠಿಣವಾದಂತೆ ಗೋಚರವಾಗುತ್ತಿದ್ದು ಬಿಜೆಪಿಯಲ್ಲಿ ಗೊಂದಲದ ವಾತಾವರಣ ಉಂಟುಮಾಡಿದೆ. ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಿದರೆ ಬಿಜೆಪಿ ಕಾಂಗ್ರೆಸ್‍ಗೆ ಸುಲಭದ ತುತ್ತಾಗುವ ಸಾಧ್ಯತೆಗಳಿವೆ.

ಹಿಂದುಳಿದ ಜಾತಿಗಳ ಮತಗಳೆ ನಿರ್ಣಾಯಕ: ಬಂಟ ಮತ್ತು ಬಿಲ್ಲವ ಸಮುದಾಯದ ಮತಗಳು ಬೈಂದೂರು ಕ್ಷೇತ್ರದಲ್ಲಿ ಅಧಿಕವಾಗಿದ್ದರೂ ಅಭ್ಯರ್ಥಿಗಳ ಗೆಲುವಿಗೆ ದೇವಾಡಿಗ,ಮೊಗವೀರ, ಖಾರ್ವಿ ಸಮುದಾಯ, ವಿಶ್ವಕರ್ಮ ಹಾಗೂ ಎಸ್ಸಿ,ಎಸ್‍ಟಿ ಮತಗಳೆ ನಿರ್ಣಾಯಕವಾಗಲಿದೆ. ಅತಿ ಹೆಚ್ಚು ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಜಯವನ್ನು ಕಂಡುಕೊಳ್ಳುವುದು ಸುಲಭವಾಗಲಿದೆ.

ಬೈಂದೂರು ಕ್ಷೇತ್ರದ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಅವರು ಅಭಿವೃದ್ಧಿ ಕೆಲಸಗಳ ಮುಖೇನ ಕ್ಷೇತ್ರದಲ್ಲಿ ಜನ ಪ್ರೀತಿಗಳಿಸಿದ್ದಾರೆ.ಹಳ್ಳಿ ಹಳ್ಳಿಗಳಲ್ಲಿ ರಸ್ತೆ ನಿರ್ಮಾಣ,ಡ್ಯಾಂ ನಿರ್ಮಾಣ ಮಾಡಿದ್ದಾರೆ.ದಿನದ 24 ಗಂಟೆಯಲ್ಲಿಯೂ ಜನರಿಗೆ ನೆರವಾಗಿ ಸಿಗುತ್ತಾರೆ.ಬೈಂದೂರು ಬಿಜೆಪಿಯಲ್ಲಿ ಯಾವುದೇ ರೀತಿ ಗೊಂದಲಗಳಿಲ್ಲ.ಪಕ್ಷ ಸೂಚಿಸಿದ ಅಭ್ಯರ್ಥಿಗಳ ಪರವಾಗಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡುತ್ತಾರೆ.ಬೈಂದೂರು ಕ್ಷೇತ್ರದಲ್ಲಿ 2023 ರಲ್ಲಿ ಕಮಲ ಮ್ತತೆ ಅರಳಲಿದೆ.

ದೀಪಕ್ ಕುಮಾರ್ ಶೆಟ್ಟಿ, ಅಧ್ಯಕ್ಷರು ಬೈಂದೂರು ಬಿಜೆಪಿ ಮಂಡಲ

ಬೈಂದೂರು ಕ್ಷೇತ್ರದಲ್ಲಿ ಈ ಬಾರಿ ಜನರು ಬದಲಾವಣೆಯನ್ನು ಬಯಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಬೂತ್ ಮಟ್ಟದಲ್ಲಿ ಮನೆ ಮನೆ ಭೇಟಿ ಮಾಡಿದಂತ ಸಂದರ್ಭದಲ್ಲಿ ಜನರು ತೋರಿಸುತ್ತಿರುವ ಪ್ರೀತಿ ಜನರ ಭಾವನೆ ನಮ್ಮನ್ನು ಹುರಿದುಂಬಿಸುತ್ತಿದೆ.ಭ್ರಷ್ಟಾಚಾರ,ಬೆಲೆ ಏರಿಕೆಯಿಂದ ಜನರು ರೋಶಿ ಹೋಗಿದ್ದಾರೆ.ಸರಳತೆ ಜೀವನ ಮತ್ತು ಎಲ್ಲರಿಗೂ ಸುಲಭವಾಗಿ ಸಿಗುವ ಕೆ.ಗೋಪಾಲ ಪೂಜಾರಿ ಅವರು ಅಭೂತ ಪೂರ್ವ ಮತಗಳನ್ನು ಪಡೆದು ನೂರಕ್ಕೆ ನೂರು ಶಾಸಕರಾಗಿ ಮತ್ತೆ ಆಯ್ಕೆ ಆಗಲಿದ್ದಾರೆ

ಪ್ರದೀಪ್ ಕುಮಾರ್ ಶೆಟ್ಟಿ, ಅಧ್ಯಕ್ಷರು ವಂಡ್ಸೆ ಬ್ಲಾಕ್ ಕಾಂಗ್ರೆಸ್