ರೈತರ ಸಮುದಾಯ ತಹಶಿಲ್ದಾರರ ಬಳಿ ತನ್ನ ಅಳಲು ತೋಡಿಕೊಂಡಿರುವ ಘಟನೆ
ಧಾರವಾಡ: ರೈತ ಎಂಬ ಕಾರಣಕ್ಕೆ ಎಲ್ಲೂ ಹೆಣ್ಣು ಸಿಗದಿದ್ದಕ್ಕೆ ಅಸಮಾಧಾನಗೊಂಡ ಯುವ ರೈತರ ಸಮುದಾಯ ತಹಶಿಲ್ದಾರರ ಬಳಿ ತನ್ನ ಅಳಲು ತೋಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು, ರೈತ ದೇಶದ ಬೆನ್ನೆಲುಬು ಅಂತಾರೆ ಆದ್ರೆ ಅದೇ ರೈತನಿಗೆ ಮದುವೆಯಾಗಲು ಹೆಣ್ಣು ಸಿಗುವುದೇ ಕಷ್ಟಕರ. ರೈತರ ಮನೆಯಲ್ಲಿ ಕೆಲಸ ಹೆಚ್ಚಿರುತ್ತೆ, ಹಾಗೂ ದುಡಿಮೆ ಸಹ ಜವರಾಯನ ಜೂಜಾಟದಂತೆ ಅಂತ ಹೆಣ್ಣು ಹೆತ್ತವರು ರೈತರಿಗೆ ತಮ್ಮ ಮಗಳನ್ನು ಕೊಡಲು ಹಿಂದೆ ಮುಂದೆ ನೋಡ್ತಾರೆ. ಇದರಂತೆಯೇ ಮದುವೆಯಾಗಲು ಹೆಣ್ಣು ಸಿಗದೆ ನೊಂದಿದ್ದ ಯುವ ರೈತರು ತಹಶಿಲ್ದಾರರ ಗ್ರಾಮ ವಾಸ್ತವ್ಯದ ವೇಳೆಯಲ್ಲಿ ಮನವಿ ಕೊಟ್ಟಿದ್ದು, ಈ ಮನವಿ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಹೊಸಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ತಹಶೀಲ್ದಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹೊಸಳ್ಳಿ ರೈತರು ದೇಶಕ್ಕೆ ಅನ್ನ ನೀಡಲು ರೈತ ಬೇಕು, ಆದ್ರೇ ಆತನಿಗೆ ಕನ್ಯೆ ನೀಡಲು ಜನ ಹಿಂದೇಟು ಹಾಕಿ ನೌಕರಿ ಇದೆಯಾ ? ಅಂತಾರೇ ಹಾಗಿದ್ರೇ ರೈತರು ಮಕ್ಕಳು ರೈತರು ಆಗಬಾರದೇ ಈ ಬಗ್ಗೆ ಸರ್ಕಾರ ಗಮನ ಹರಿಸಿ ರೈತರಿಗೆ ಕನ್ಯೆ ನೀಡುವಂತೆ ಜನಜಾಗೃತಿ ಕಾರ್ಯಕ್ರಮ ಮಾಡಿ ಅರಿವು ಮೂಡಿಸುವಂತೆ ಕುಂದಗೋಳ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಇನ್ನುಳಿದಂತೆ ತಹಶೀಲ್ದಾರ ಗ್ರಾಮ ವಾಸ್ತವ್ಯ ಆಯಾ ಗ್ರಾಪಂ ಸಂಬಂಧಪಟ್ಟ ಇಲಾಖೆ ಒಪ್ಪಿಸಲು ಮಾತ್ರ ಸಿಮೀತ ಎಂಬಂತೆ ಭಾಸವಾಗಿತ್ತು, ವಿನಃ ಅವಶ್ಯಕ ಅಭಿವೃದ್ಧಿ ಚರ್ಚೆ ದೂರವಾದವು, ಇನ್ನೂ ತಹಶೀಲ್ದಾರರಿಗೆ ಮನವಿ ಸಲ್ಲಿಸಲು ಬಂದ ಅನೇಕರಲ್ಲಿ ಮಾತಿನ ಭರಾಟೆಯ ನಡೆದು ಅಭಿವೃದ್ಧಿ ಬಗ್ಗೆ ಸಾಲು ಸಾಲು ಪ್ರಶ್ನೆಗೆ ಜನ ವೇದಿಕೆ ಏರಿದರು.
ಒಟ್ಟಾರೆ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದ ತಹಶೀಲ್ದಾರ ಗ್ರಾಮ ವಾಸ್ತವ್ಯದಲ್ಲಿ "ಅನ್ನದಾತನಿಗೆ ಕನ್ಯೆ ನೀಡಿ" ಎಂಬ ವಿಚಾರದ ಬಗ್ಗೆ ರಾಜ್ಯದಿಂದ ಹಿಡಿದು ಕೇಂದ್ರದವರೆಗೂ ಚರ್ಚೆ ಆಗಬೇಕಿದ್ದು ಸಂಬಂಧಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳು ಈ ಬಗ್ಗೆ ದ್ವನಿ ಎತ್ತಬೇಕಿದೆ.