ಕೃಷಿ ಮೇಳಕ್ಕೆ 7.16 ಲಕ್ಷ ಜನರ ಭೇಟಿ

ಬೆಂಗಳೂರು: ಕೃಷಿ ಮೇಳಕ್ಕೆ ಶನಿವಾರ 7.16 ಲಕ್ಷ ರೈತರು ಮತ್ತು ಸಾರ್ವಜನಿಕರು ಭೇಟಿ ನೀಡಿದ್ದು, ಮೇಳದ ಇತಿಹಾಸದಲ್ಲಿ ಇಷ್ಟು ಪ್ರಮಾಣದ ಜನರು ಭೇಟಿ ನೀಡಿದ್ದು ಇದೇ ಮೊದಲ ಬಾರಿಯಾಗಿದೆ.
ಕೊರೊನಾ ಕಾರಣದಿಂದಾಗಿ ಕಳೆದ ಕೆಲ ವರ್ಷಗಳಿಂದ ಕಳೆಗುಂದಿದ್ದ ಕೃಷಿ ಮೇಳ ಈ ಬಾರಿ ಅದ್ಧೂರಿಯಾಗಿ ನಡೆಯುತ್ತಿದೆ.
ಕೃಷಿ ಚಟುವಟಿಕೆಗೆ ಅನುಕೂಲವಾಗುವಂತಹ ಹಲವು ಉದ್ಯಮಗಳು ತಮ್ಮ ತಂತ್ರಜ್ಞಾನ ಮತ್ತು ಉತ್ಪನ್ನಗಳ ಪ್ರದರ್ಶನ ಮಾಡಿದವು. ಜಾಗ ಉಳಿಸುವ ಬಸಿಗಾಲುವೆ: ಕೃಷಿ ಮೇಳದಲ್ಲಿ ಈ ಬಾರಿ ಕೃಷಿ ಚಟುವಟಿಕೆಗೆ ಅನುಕೂಲವಾಗುವಂತಹ ಹಾಗೂ ಕೃಷಿ ಭೂಮಿ ಯಲ್ಲಿನ ಸಮಸ್ಯೆಯನ್ನು ನಿವಾರಿಸುವಂತಹ ಕ್ರಮಗಳು ಪ್ರದರ್ಶನಗೊಳ್ಳುತ್ತಿದೆ.
ಅದರಲ್ಲೊಂದೆನ್ನುವಂತೆ ನೀರು ಹೆಚ್ಚಾಗಿ ಜೌಗು, ಲವಣ ಪೀಡಿತ ಮತ್ತು ಹುಳಿಮಣ್ಣಿನ ಕೃಷಿ ಭೂಮಿಯಲ್ಲಿ ಯಾವುದೇ ಜಾಗವನ್ನು ನಷ್ಟ ಮಾಡದೆ ಬಸಿಗಾಲುವೆ ನಿರ್ಮಿಸಿ ನೀರನ್ನು
ಹೊರಹಾಕುವ ವಿಧಾನವನ್ನು ಪ್ರದರ್ಶಿಸಲಾಗುತ್ತಿದೆ. ಕೃಷಿ ವಿಶ್ವವಿದ್ಯಾಲಯದ ಮಣ್ಣು ಪರೀಕ್ಷೆ ಮತ್ತು ಬೆಳೆ ಸ್ಪಂದನೆ ಪ್ರಾಯೋಜನೆ ಹಾಗೂ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ ವಿಭಾಗದಿಂದ ಅಭಿವೃದ್ಧಿಪಡಿಸಲಾಗಿರುವ ಸಮಸ್ಯಾತ್ಮಕ ಮಣ್ಣಿನ ನಿರ್ವಹಣೆ ಮತ್ತು ಮಣ್ಣಿನ ಫಲವತ್ತತೆ ಹೆಚಿಸಲು ಪ್ಲಾಸ್ಟಿಕ್ ಪೈಪ್‌ನ ಬಸಿಗಾಲುವೆ ನಿರ್ಮಾಣದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ.
ಇದರಲ್ಲಿ ಕೃಷಿ ಭೂಮಿ ಯಲ್ಲಿ ಪ್ರತ್ಯೇಕವಾಗಿ ಕಾಲುವೆ ನಿರ್ಮಿಸಿ ನೀರನ್ನು ಕೆರೆ ಅಥವಾ ಬೇರೆಡೆಗೆ ಹರಿಯುವಂತೆ ಮಾಡುವ ಬದಲು ಪ್ಲಾಸ್ಟಿಕ್ ಪೈಪ್‌ಗಳಿಗೆ ಸಣ್ಣ ತೂತನ್ನು ಮಾಡಿ ಕೃಷಿ ಭೂಮಿಯಲ್ಲಿ 4ರಿಂದ 6 ಅಡಿ ಕೆಳಭಾಗದಲ್ಲಿ ಅದನ್ನು ಅಳವಡಿಸಬೇಕಿದೆ. 30 ಮೀ. ಅಂತರದಲ್ಲಿ ಈ ರೀತಿ ಪೈಪ್ ಅಳವಡಿಸುವುದರಿಂದ ಭೂಮಿಯಲ್ಲಿನ ನೀರಿನ ಪ್ರಮಾಣವನ್ನು ಪೈಪ್‌ನಲ್ಲಿ ಸೆಳೆದು ಹೊರಹಾಕಲು ಅನುಕೂಲವಾಗಲಿದೆ. ಇದರಿಂದ ಬಸಿ ಕಾಲುವೆ ನಿರ್ಮಾಣದ ಜತೆಗೆ, ಅದಕ್ಕಾಗಿ ಪ್ರತ್ಯೇಕ ಭೂಮಿಯನ್ನು ಬಳಸಿಕೊಳ್ಳುವುದು ತಪ್ಪಲಿದೆ.
ಕಚ್ಚದ ಜೇನು ಹುಳ, ಕಡಿಮೆ ವೆಚ್ಚದಲ್ಲಿ ಸಾಕಾಣಿಕೆ: ಸಾಮಾನ್ಯವಾಗಿ ಜೇನು ನೊಣಗಳು ಕಚ್ಚುತ್ತವೆ. ಆದರೆ, ಕೃಷಿ ಮೇಳದಲ್ಲಿ ಪುದ್ಯೋದು ಹನಿ ಬೀ ಫಾರ್ಮ್ ಸಂಸ್ಥೆ ಕಚ್ಚದ ಜೇನು ನೊಣವನ್ನು ಪರಿಚಯಿಸುತ್ತಿದೆ. ರಾಳ ಜೇನು, ನುಸಿ ಜೇನು ಎಂದು ಕರೆಯಲ್ಪಡುವ ಕಿರುಜೇನು ಸಾಕಣೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಈ ಜೇನು ನೊಣವು ಬೇರೆಲ್ಲ ಜೇನಿನಂತೆಯೇ ಪರಾಗಸ್ಪಷ್ಟ ಮಾಡಿ ಜೇನು ಉತ್ಪಾದನೆ ಮಾಡುತ್ತವೆ. ಆದರೆ ತುಡುವೆ ಜೇನಿನಂತೆ ದುಬಾರಿ ಪೆಟ್ಟಿಗೆ, ಜೇನು ತೆಗೆಯುವ ಯಂತ್ರದ ಅವಶ್ಯಕತೆ ಇದಕ್ಕಿಲ್ಲ. ಅಲ್ಲದೆ ಜೇನು ತುಪ್ಪ ಉತ್ಪಾದನೆಯಾಗಿದೆಯೇ ಇಲ್ಲವೇ ಎಂಬುದನ್ನು ಪದೇ ಪದೆ ನೋಡುವ ಅವಶ್ಯಕತೆಯಿಲ್ಲ. ಬದಲಿಗೆ ಜೇನು ಪೆಟ್ಟಿಗೆಯನ್ನು ಎತ್ತಿದರೆ ಅದು ಭಾರವೆನಿಸಿದರೆ ಜೇನುತುಪ್ಪ ಉತ್ಪಾದನೆಯಾಗಿದೆ ಎಂಬುದು ತಿಳಿಯುತ್ತದೆ