ಮಹಾರಾಷ್ಟ್ರ ಸಾರಿಗೆ ಮುಷ್ಕರ: ಇದುವರೆಗೆ 918 ಮಂದಿ ನೌಕರರ ಅಮಾನತು
ಮುಂಬೈ, ನವೆಂಬರ್ 10: ಮಹಾರಾಷ್ಟ್ರ ಸಾರಿಗೆ ನೌಕರರ ಮುಷ್ಕರ 13ನೇ ದಿನಕ್ಕೆ ಕಾಲಿಟ್ಟಿದ್ದು, ಇದುವರೆಗೆ 918 ನೌಕರರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಸಾರಿಗೆ ಸಂಸ್ಥೆಗಳನ್ನು ಸರ್ಕಾರದ ಸಾರಿಗೆ ಇಲಾಖೆಯೊಂದಿಗೆ ವಿಲೀನಗೊಳಿಸಬೇಕೆಂಬ ಬೇಡಿಕೆಯೊಂದಿಗೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ನಡೆಸುತ್ತಿರುವ ಮುಷ್ಕರ ಇಂದು 13ನೇ ದಿನಕ್ಕೆ ಕಾಲಿಟ್ಟಿದೆ.
ಅಕ್ಟೋಬರ್ 28ರಿಂದ ಆರಂಭವಾದ ಮುಷ್ಕರ ಒಟ್ಟು 250 ಡಿಪೋಗಳ ಪೈಕಿ ಇಂದು ಬೆಳಗ್ಗೆ 40 ಡಿಪೋಗಳು ಮುಷ್ಕರ ಮುಂದುವರೆಸಿದ್ದವು. ಈ ಮೊದಲು 59 ಡಿಪೋಗಳು ಮುಷ್ಕರ ನಡೆಸುತ್ತಿದ್ದವು. ಕಳೆದ ವಾರ, ಎಂಎಸ್‌ಆರ್‌ಟಿಸಿ ನೌಕರರು ಸಂಬಳ ಸೇರಿದಂತೆ ವಿವಿಧ ಬೇಡಿಕೆಗಳ ಮೇಲೆ ಮುಷ್ಕರದ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದಾರೆ.
ಮುಷ್ಕರವನ್ನು ಪ್ರಶ್ನಿಸಿ ಸಾರಿಗೆ ನಿಗಮ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಮುಷ್ಕರ ಕೈಬಿಡುವಂತೆ ನೌಕರರ ಸಂಘಟನೆಗಳಿಗೆ ಸೂಚಿಸಿತ್ತು. ನ್ಯಾಯಾಲಯ ಆದೇಶದ ಹೊರತಾಗಿಯೂ ಕೆಲ ಡಿಪೋಗಳ ನೌಕರರು ಮುಷ್ಕರ ಮುಂದುವರೆಸಿದ್ದಾರೆ.
ಮುಷ್ಕರಕ್ಕೂ ಮುನ್ನ ಸಾರಿಗೆ ಸರ್ಕಾರ ಮತ್ತು ನೌಕರರ ಸಂಘಟನೆಗಳ ಜೊತೆ ನಡೆದ ಸಭೆಯಲ್ಲಿ ಸಾರಿಗೆ ಸಚಿವರು ನಿಗಮವನ್ನು ಸರ್ಕಾರದೊಂದಿಗೆ ವಿಲೀನ ಮಾಡುವ ಬೇಡಿಕೆಗೆ ಮಾತ್ರ ಸಮ್ಮತಿಸಿರಲಿಲ್ಲ. ಉಳಿದಂತೆ ಕೆಲವು ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿತ್ತು.
ಬುಧವಾರ ಬಾಂಬೆ ಹೈಕೋರ್ಟ್ ನಿರ್ದೇಶನದಂತೆ ʻನವೆಂಬರ್ 3 ರ ಮಧ್ಯರಾತ್ರಿಯಿಂದ ಮುಂದಿನ ಆದೇಶದವರೆಗೆ ಉದ್ದೇಶಿತ ರ‍್ಯಾಲಿಗಳು, ಮುಷ್ಕರಗಳು ಅಥವಾ ಕೆಲಸವನ್ನು ಸ್ಥಗಿತಗೊಳಿಸುವುದನ್ನು ಮುಂದುವರಿಸದಂತೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲಾ ಉದ್ಯೋಗಿಗಳಿಗೆʼ ತಿಳಿಸಿತು.
ಎಂಎಸ್‌ಆರ್‌ಟಿಸಿ ನೌಕರರ ಒಂದು ವಿಭಾಗವು ಅಕ್ಟೋಬರ್ 28 ರಿಂದ ರಾಜ್ಯ ಸರ್ಕಾರದೊಂದಿಗೆ ನಗದು ಕೊರತೆಯಿರುವ ನಿಗಮವನ್ನು ವಿಲೀನಗೊಳಿಸುವಂತೆ ಕೋರಿ ಮುಷ್ಕರ ನಡೆಸುತ್ತಿದೆ ಎಂದು ಸಾರಿಗೆ ನೌಕರರ ಸಂಘಟನೆಗಳು ತಿಳಿಸಿವೆ.
ಆದರೆ ನೌಕರರ ಪ್ರಮುಖ ಬೇಡಿಕೆಯೇ ನಿಗಮವನ್ನು ಸರ್ಕಾರದೊಂದಿಗೆ ವಿಲೀನ ಮಾಡಬೇಕು ಎಂಬುದಾಗಿದೆ. ದೇಶದಲ್ಲೇ ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮ ದೊಡ್ಡ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ಸುಮಾರು 16 ಸಾವಿರ ಬಸ್‍ಗಳಿದ್ದು, 93 ಸಾವಿರ ಚಾಲಕ ಹಾಗೂ ನಿವಾರ್ಹಕರಿದ್ದಾರೆ. ಪ್ರತಿ ದಿನ 65 ಲಕ್ಷ ಪ್ರಯಾಣಿಕರ ನಿಗಮದ ಸೇವೆ ಬಳಕೆ ಮಾಡುತ್ತಿದ್ದಾರೆ