ನಿಜಲಿಂಗಪ್ಪ, ಪಾಟೀಲ್‌ರನ್ನು ಕಾಂಗ್ರೆಸ್‌ ಅವಮಾನಿಸಿದ್ದು ಜನತೆಗೆ ತಿಳಿದಿದೆ: ಪ್ರಧಾನಿ ಮೋದಿ

ನಿಜಲಿಂಗಪ್ಪ, ಪಾಟೀಲ್‌ರನ್ನು ಕಾಂಗ್ರೆಸ್‌ ಅವಮಾನಿಸಿದ್ದು ಜನತೆಗೆ ತಿಳಿದಿದೆ: ಪ್ರಧಾನಿ ಮೋದಿ

ಬೆಳಗಾವಿ: ಕರ್ನಾಟಕ ಕಂಡ ಮಹಾನ್‌ ನಾಯಕರಾದ ನಿಜಲಿಂಗಪ್ಪ, ವಿರೇಂದ್ರ ಪಾಟೀಲ್‌ ಅವರಿಗೆ ಕಾಂಗ್ರೆಸ್‌ ಹೇಗೆ ಅವಮಾನ ಮಾಡಿದೆ ಎಂದು ಎಲ್ಲರಿಗೂ ತಿಳಿದಿದೆ. ಮಲ್ಲಿಕಾರ್ಜುನ ಬಗ್ಗೆ ನನಗೆ ಗೌರವ ಇದೆ. ಆದರೆ ಅವರ ರಿಮೋಟ್‌ ಕಂಟ್ರೋಲ್‌ ಬೇರೆ ಕಡೆ ಇದೆ.

ಛತ್ತಿಸ್‌ಗಡದಲ್ಲಿ ಕಾಂಗ್ರೆಸ್‌ ಅಧಿವೇಶನದಲ್ಲಿ ಖರ್ಗೆ ಭಾಗಿಯಾಗಿದ್ದರು. ಅವರು ಎಐಸಿಸಿ ಅಧ್ಯಕ್ಷರಾಗಿದ್ದರೂ ಅಲ್ಲಿ ಅವರಿಗೆ ಸೂಕ್ತ ಗೌರವ ದೊರೆತಿಲ್ಲ. ಅಧಿವೇಶನದಲ್ಲಿ ಗಾಂಧಿ ಕುಟುಂಬಕ್ಕೆ ಬಿಸಿಲಿನ ರಕ್ಷಣೆಗೆ ಛತ್ರಿ ಹಿಡಿದಿದ್ದರು. ಆದರೆ ಖರ್ಗೆ ಅವರಿಗೆ ಬಿಸಿಲಿನಿಂದ ರಕ್ಷಣೆ ಪಡೆಯುವ ವ್ಯವಸ್ಥೆಯೇ ಇರಲಿಲ್ಲ. ಇದು ಕಾಂಗ್ರೆಸ್‌ ಸಂಸ್ಕೃತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬೆಳಗಾವಿ ಮಾಲಿನಿ ಸಿಟಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದರು.
ಮೋದಿ ಜೀವಂತ ಇರುವವರಿಗೆ ಕಾಂಗ್ರೆಸ್‌ ಬೇಳೆ ಬೇಯುವುದಿಲ್ಲ ಎಂದು ತಿಳಿದಿದೆ. ಅದಕ್ಕಾಗಿಯೇ ಮೋದಿ ಸಾಯಲಿ ಎಂದು ಹೇಳುತ್ತಿದ್ದಾರೆ. ಮೋದಿಗೆ ಸಮಾಧಿ ತೋಡಬೇಕು ಎನ್ನುತ್ತಿದ್ದಾರೆ. ಆದರೆ ಜನರು ಕಮಲ ಅರಳಿಸಲು ನಿಶ್ಚಯಿಸಿದ್ದಾರೆ ಎಂದರು.

ನೈಸರ್ಗಿಕ ಕೃಷಿಗೆ ಸರ್ಕಾರ ಒತ್ತು ನೀಡಿದೆ. ಸಿರಿಧಾನ್ಯಗಳ ಬಳಕೆಗೆ ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಒತ್ತು ನೀಡಿದ್ದರು ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು 10 ಕಿಲೋಮೀಟರ್‌ ಪ್ರಧಾನಿ ಮೋದಿ ರೋಡ್‌ ಶೋ ನಡೆಸಿದರು. 1 ಗಂಟೆ 35 ನಿಮಿಷ ರೋಡ್‌ ಶೋ ನಡೆಯಿತು. ನಂತರ ಮಾಲಿನಿ ಸಿಟಿ ಮೈದಾನದಲ್ಲಿ ಸಮಾವೇಶ ಜರುಗಿತು.

9 ರೀತಿಯ ಸಿರಿಧಾನ್ಯಗಳ ಅನಾವರಣ: 2023 ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಆಚರಿಸಲಾಗುತ್ತಿದೆ. ಸುಗ್ಗಿಯ ಧ್ಯೋತಕವಾಗಿ ಮಣ್ಣಿನ ಮಡಿಕೆಗೆ 9 ರೀತಿಯ ಸಿರಿಧಾನ್ಯಗಳನ್ನು ತುಂಬಿದರು.

ಕಿಸಾನ್‌ ಸಮ್ಮಾನ್‌ ನಿಧಿ ಬಿಡುಗಡೆ: ಕಿಸಾನ್‌ ಸಮ್ಮಾನ್‌ ನಿಧಿಯ 13 ನೇ ಕಂತನ್ನು ಪ್ರಧಾನಿ ಬಿಡುಗಡೆಗೊಳಿಸಿದರು.