ಪ್ರಾದೇಶಿಕ ಭಾಷೆಯಲ್ಲಿ ಕಾನೂನು ಶಿಕ್ಷಣ

ಪ್ರಾದೇಶಿಕ ಭಾಷೆಯಲ್ಲಿ ಕಾನೂನು ಶಿಕ್ಷಣ

ನವದೆಹಲಿ,ಅ.17- ಈ ವರ್ಷಾಂತ್ಯಕ್ಕೆ ಕೇಂದ್ರ ಸರ್ಕಾರ ಸ್ಥಳೀಯ ಭಾಷೆಗಳಲ್ಲಿ ವಿಷಯಗಳನ್ನು ಹೊಂದಿರುವ 75 ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಹೊರತರಲಿದೆ. ಆಯಾ ರಾಜ್ಯಗಳ ಮಾತೃಭಾಷೆಯಲ್ಲಿ ಕಾನೂನು ಶಿಕ್ಷಣವನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ.

ಕಾನೂನು ಪದವಿ ತರಗತಿ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಈ ಪುಸ್ತಕಗಳನ್ನು ಬರೆಯುತ್ತಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪದವಿ ಕಾನೂನು ತರಗತಿಗಳ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಗಳಲ್ಲಿ ಪುಸ್ತಕ ಪ್ರಕಟಿಸುವ ಕೆಲಸಗಳನ್ನು ಮಾಡುತ್ತಿದ್ದೇವೆ. ಈ ವರ್ಷಾಂತ್ಯಕ್ಕೆ ಪುಸ್ತಕಗಳು ಪ್ರಕಟವಾಗಲಿದೆ.

ಮಾತೃಭಾಷೆಗಳಲ್ಲಿ ಕಾನೂನು ಶಿಕ್ಷಣ ಪಡೆಯಬೇಕೆಂಬ ಇಚ್ಛೆಯಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬುದೇ ಇದರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕಾನೂನು ಕಾಲೇಜುಗಳು ಮತ್ತು ಸಂಸ್ಥೆಗಳು ಈ ಕಾನೂನು ಪುಸ್ತಕಗಳನ್ನು ಪರಿಚಯಿಸಬಹುದು. ಅಕ್ಟೋಬರ್ 14ರಂದು ಭಾರತೀಯ ಭಾಷಾ ಸಮಿತಿ ಅಥವಾ ಉನ್ನತಾಧಿಕಾರ ಸಮಿತಿಯು ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರದಲ್ಲಿ 13 ಪ್ರಾದೇಶಿಕ ಭಾಷೆಗಳಲ್ಲಿ ಮೂಲ ಕಾನೂನು ಪುಸ್ತಕಗಳನ್ನು ಪ್ರಕಟಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020ರಡಿ ಭಾರತೀಯ ಭಾಷೆಗಳ ಸಮಗ್ರ ಮತ್ತು ಬಹುಶಾಸ್ತ್ರೀಯ ಅಭಿವೃದ್ಧಿಗಾಗಿ ತ್ವರಿತ ಮಾರ್ಗಗಳು ಮತ್ತು ಕ್ರಿಯಾ ಯೋಜನೆಗಳನ್ನು ಶಿಫಾರಸು ಮಾಡಲು ಈ ಉನ್ನತ ಅಕಾರದ ಸಮಿತಿಯನ್ನು ರಚಿಸಲಾಗಿದೆ. ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್ ಸಹಯೋಗದೊಂದಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಯುಜಿ ಕೋರ್ಸ್‍ಗಳಿಗೆ ಗುರುತಿಸಲಾದ 40 ಮತ್ತು ಪಿಜಿಗೆ 20 ವಿಷಯಗಳಿಗೆ ಪಠ್ಯಪುಸ್ತಕಗಳನ್ನು ಪ್ರಕಟಿಸಲಾಗುವುದು. ಆದಾಗ್ಯೂ, ಮೂಲ ಪುಸ್ತಕಗಳ ಹೊರತಾಗಿ ಅಗತ್ಯ ಕಾಯಿದೆಗಳು, ಶಾಸನಗಳು ಮತ್ತು ತೀರ್ಪುಗಳನ್ನು ಅನುವಾದಿಸಲು ನಿರ್ಧರಿಸಲಾಗಿದೆ ಎಂದು ಮೊನ್ನೆ ಅಕ್ಟೋಬರ್ 14 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಖಿಲ ಭಾರತ ಕಾನೂನು ಮಂತ್ರಿಗಳು ಮತ್ತು ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಪ್ರಸ್ತಾಪಿಸಿದ್ದರು.

ಸುಲಭ ನ್ಯಾಯವನ್ನು ತರಲು ಹೊಸ ಕಾನೂನುಗಳನ್ನು ಸ್ಪಷ್ಟ ರೀತಿಯಲ್ಲಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಬೇಕು ಎಂದು ಅವರು ಒತ್ತಿ ಹೇಳಿದ್ದರು.

ಇದರಿಂದಾಗಿ ಬಡವರು ಸಹ ಅವುಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಕಾನೂನು ಭಾಷೆ ನಾಗರಿಕರಿಗೆ ಅಡ್ಡಿಯಾಗಬಾರದು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ.