ದೆಹಲಿ ಪೊಲೀಸರ ಭರ್ಜರಿ ಬೇಟೆ: ಲೇಡಿ ಡಾನ್ ಸೇರಿದಂತೆ ಇಬ್ಬರು ಗ್ಯಾಂಗ್ಸ್ಟರ್ ಬಂಧನ

ದೆಹಲಿ: ದೆಹಲಿ ವಿಶೇಷ ತನಿಖಾ ದಳ ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲೇಡಿ ಡಾನ್ ಅನುರಾಧ ಮತ್ತು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕಲ ಜತೇದಿಯನ್ನು ಬಂಧಿಸಿದ್ದಾರೆ.
ಗ್ಯಾಂಗ್ಸ್ಟರ್ ಕಲ ಜತೇದಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ದೆಹಲಿ, ಪಂಜಾಬ್, ಹರಿಯಾಣ, ರಾಜಸ್ತಾನಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈತನ ಬಗ್ಗೆ ಮಾಹಿತಿ ಕೊಟ್ಟವರಿಗೆ 7 ಲಕ್ಷ ರೂ. ಬಹುಮಾನವನ್ನು ಸಹ ಘೋಷಿಸಲಾಗಿತ್ತು. ಇಂದು ಉತ್ತರಪ್ರದೇಶದ ಷಹರ್ನ್ಪುರದಲ್ಲಿ ಬಂಧಿಸಲಾಗಿದೆ ಎಂದು ವಿಶೇಷ ದಳದ ಡಿಸಿಪಿ ಮನೀಷ್ ಚಂದ್ರ ಮಾಹಿತಿ ನೀಡಿದ್ದಾರೆ.
ಲೇಡಿ ಡಾನ್ ಬಂಧನ:
ಮತ್ತೊಂದು ಪ್ರಕರಣದಲ್ಲಿ ಪಾತಕಿ ಜತೇದಿ ಗುಂಪಿನ ಸದಸ್ಯೆ, ಲೇಡಿ ಡಾನ್ ಅನುರಾಧಳನ್ನು ದೆಹಲಿ ವಿಶೇಷ ದಳ ಪೊಲೀಸರು ಬಂಧಿಸಿದ್ದಾರೆ. ಈಕೆಯ ಮೇಲೆ ಕೊಲೆ, ಸುಲಿಗೆ ಸೇರಿದಂತೆ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ರಾಜಸ್ತಾನದಲ್ಲಿ ಪ್ರಕರಣ ದಾಖಲಾಗಿದ್ದವು.