ಪೆಗಾಸಸ್‌ನ ಭಾರತೀಯ ಗ್ರಾಹಕನ ಹೆಸರು ಶೀಘ್ರ ಬಹಿರಂಗ: ಪಿ.ಚಿದಂಬರಂ ವಿಶ್ವಾಸ

ನವದೆಹಲಿ: ಇಸ್ರೇಲ್‌ನ ಎನ್‌ಎಸ್‌ಒ ಗುಂಪಿನ ಪೆಗಾಸಸ್ ಗೂಢಚಾರಿಕೆಯ 'ಭಾರತೀಯ ಗ್ರಾಹಕ' ಯಾರು ಎಂಬುದು ಪತ್ತೆಯಾಗುವವರೆಗೂ ಕೇಂದ್ರ ಸರ್ಕಾರ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸುತ್ತಿರುತ್ತದೆ ಎಂದು ಹೇಳಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, 'ಆ ಗ್ರಾಹಕರ ಹೆಸರು ಶೀಘ್ರದಲ್ಲೇ ಬಹಿರಂಗವಾಗುತ್ತದೆ' ಎಂದು ಹೇಳಿದ್ದಾರೆ.
'ಗೂಢಚಾರಿಕೆ ತಂತ್ರಾಂಶವನ್ನು ಖರೀದಿಸಿರುವ ಭಾರತೀಯ ಗ್ರಾಹಕ ಯಾರು ? ಅದು ಕೇಂದ್ರ ಸರ್ಕಾರವೇ ? ಸರ್ಕಾರದ ಸಂಸ್ಥೆಯೇ ? ಖಾಸಗಿ ಘಟಕವೇ...?' - ಹೀಗೆ ಟ್ವೀಟರ್‌ನಲ್ಲಿ ಹಲವು ಪ್ರಶ್ನೆಗಳನ್ನು ಪೋಸ್ಟ್ ಮಾಡಿದ್ದಾರೆ.
ಭಾರತೀಯ ಗ್ರಾಹಕ ಪತ್ತೆಯಾಗುವವರೆಗೂ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ಎಲ್ಲ ಆರೋಪವನ್ನು ನಿರಾಕರಿಸುತ್ತಿರುತ್ತದೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
40 ಪತ್ರಕರ್ತರು, ಸಚಿವರು, ವಿರೋಧ ಪಕ್ಷಗಳ ನಾಯಕರು, ಭಾರತದ ಹಲವಾರು ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ 300ಕ್ಕೂ ಹೆಚ್ಚು ನಾಗರಿಕರ ಮೊಬೈಲ್ ಫೋನ್‌ಗಳನ್ನು ಪೆಗಾಸಸ್ ಗೂಢಚಾರಿಕೆ ತಂತ್ರಾಂಶದ ಮೂಲಕ ಹ್ಯಾಕ್ ಮಾಡಲಾಗಿದೆ ಎಂದು ನ್ಯೂಸ್ ಪೋರ್ಟಲ್ 'ದಿ ವೈರ್' ವರದಿ ಮಾಡಿತ್ತು. 'ಇಸ್ರೇಲ್‌ನ ಎನ್‌ಎಸ್‌ಒ ಗುಂಪಿನ ಈ ಗೂಢಚಾರಿಕೆ ತಂತ್ರಾಂಶಕ್ಕೆ ಭಾರತದಲ್ಲೇ ಗ್ರಾಹಕರಿದ್ದಾರೆ' ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು. ಚಿದಂಬರಂ ಅವರು ಆ ಗ್ರಾಹಕ ಯಾರು ಎಂದು ತಮ್ಮ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.