ಪರಿಷತ್ ಚುನಾವಣೆ: ಬಿಜೆಪಿಗೆ ಮುಳುವಾಯ್ತಾ ಲಖನ್ ಜಾರಕಿಹೊಳಿ ಸ್ಪರ್ಧೆ? ಬೆಳಗಾವಿಯಲ್ಲಿ ಕಾಂಗ್ರೆಸ್​ಗೆ ಗೆಲುವು

ಪರಿಷತ್ ಚುನಾವಣೆ: ಬಿಜೆಪಿಗೆ ಮುಳುವಾಯ್ತಾ ಲಖನ್ ಜಾರಕಿಹೊಳಿ ಸ್ಪರ್ಧೆ? ಬೆಳಗಾವಿಯಲ್ಲಿ ಕಾಂಗ್ರೆಸ್​ಗೆ ಗೆಲುವು
ಆಡಳಿತ ಪಕ್ಷದ ಸರಿಸಮನಾಗಿ ಕಾಂಗ್ರೆಸ್ ಗೆದ್ದಿರೋದು ಒಳ್ಳೆಯ ದಿಕ್ಸೂಚಿಯಾಗಿದೆ. ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ಮುಂದಿನ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಕೂಡ ಅಷ್ಟೇ ಸತ್ಯ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಹೇಳಿಕೆ ನೀಡಿದ್ದಾರೆ.

ಬೆಳಗಾವಿ: ಬಿಜೆಪಿ ಹಾಗೂ ಬೆಳಗಾವಿ ಭಾಗದ ಪ್ರಭಾವಿ ನಾಯಕ ರಮೇಶ ಜಾರಕಿಹೊಳಿ ಸವಾಲನ್ನು ಎದುರಿಸಿಯೂ ಲಕ್ಷ್ಮೀ ಹೆಬ್ಬಾಳಕರ್ ಗೆದ್ದು ಬೀಗಿದ್ದಾರೆ. ತನ್ನ ಸಹೋದರನ್ನ ಗೆಲ್ಲಿಸಿ ಸಾಹುಕಾರ್​ಗೆ ಚೆಕ್ ಮೇಟ್ ನೀಡಿದ್ದಾರೆ. ಕಾಂಗ್ರೆಸ್ ಸೋಲಿಸುತ್ತನೆ ಎಂದು ಪಣ ತೊಟ್ಟಿದ್ದ ರಮೇಶ ಜಾರಕಿಹೊಳಿಗೆ ಭಾರಿ ಮುಖಭಂಗ ಆಗಿದೆ. ಸಹೋದರ ಲಖನ್ ಜಾರಕಿಹೊಳಿ ಕಣಕ್ಕಿಳಿಸಿ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆ ಆಗಿದೆ ಎಂದು ಅಭಿಪ್ರಾಯಗಳು ಕೇಳಿಬಂದಿದೆ. ಆ ಮೂಲಕ ಲಕ್ಷ್ಮೀಗೆ ಶಾಕ್ ನೀಡಲು ಹೋಗಿ ರಮೇಶ್ ಜಾರಕಿಹೊಳಿ ಕೈಸುಟ್ಟುಕೊಂಡಿದ್ದಾರೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ಬೆಳಗಾವಿ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನದ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತದಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲುವು ಸಾಧಿಸಿದ್ದಾರೆ. ಮೊದಲ ಪ್ರಾಶಸ್ತ್ಯದಲ್ಲಿ ಅಭ್ಯರ್ಥಿಗಳು ಪಡೆದ ಮತಗಳ ವಿವರ ಈ ರೀತಿ ಇದೆ. ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಗೆ 3718 ಮತ. ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ 2454 ಮತಗಳು. ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ 2526 ಮತಗಳು ಲಭಿಸಿದೆ. ಭೋಜನ ವಿರಾಮ ಬಳಿಕ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯಲಿದೆ. ಎರಡನೇ ಪ್ರಾಶಸ್ತ್ಯದ ಮತಗಳ ಮೇಲೆ ಇಬ್ಬರು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಆಗಲಿದೆ.

ವಿಧಾನ ಪರಿಷತ್​ಗೆ ಬರಲು ವೋಟ್​ಗೆ ಲಕ್ಷ ಲಕ್ಷ ಕೊಟ್ಟು ಗೆದ್ದು ಬರುತ್ತಿರೋದು ವಿಷಾದನೀಯ
ಆಡಳಿತ ಪಕ್ಷದ ಸರಿಸಮನಾಗಿ ಕಾಂಗ್ರೆಸ್ ಗೆದ್ದಿರೋದು ಒಳ್ಳೆಯ ದಿಕ್ಸೂಚಿಯಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಮುಂದಿನ ವಿಧಾನ ಸಭೆ ಚುನಾವಣೆಗೆ ಇದು ದಿಕ್ಸೂಚಿ. ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ಮುಂದಿನ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಕೂಡ ಅಷ್ಟೇ ಸತ್ಯ. ಬೀದರ್ ನಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಿರೋದು ಖುಷಿ ನೀಡಿದೆ. ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದಗಳನ್ನ ಹೇಳುತ್ತೇನೆ. ಪ್ರವಾಹ, ಅತಿವೃಷ್ಟಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಪರಿಹಾರ ನೀಡುವಲ್ಲಿ ಈ ಸರ್ಕಾರ ಎಡವಿದೆ ಎಂದು ಬಿಜೆಪಿ ವಿರುದ್ಧ ಎಸ್.ಆರ್ ಪಾಟೀಲ್ ಗುಡುಗಿದ್ದಾರೆ.

ವಿಧಾನ ಪರಿಷತ್​ಗೆ ಬರಲು ವೋಟ್​ಗೆ ಲಕ್ಷ ಲಕ್ಷ ಕೊಟ್ಟು ಗೆದ್ದು ಬರುತ್ತಿರೋದು ವಿಷಾದನೀಯವಾಗಿದೆ. ಮೇಲ್ಮನವಿ ಈ ರೀತಿಯ ಆಯ್ಕೆ ಸರಿಯಲ್ಲ. ಹಾಗಂತ ಮೇಲ್ಮನವಿಯನ್ನೇ ರದ್ದು ಮಾಡಬೇಕು ಅಂತಾ ಈಶ್ವರಪ್ಪ ಹೇಳೋದು ಸರಿಯಿಲ್ಲ. ಇದನ್ನ ಯಾವರೀತಿ ಸರಿಪಡಿಸಬೇಕು ಅನ್ನೋದರ ಬಗ್ಗೆ ನಾವೂ ಯೋಚಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಬೀದರ್, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಜಯಶಾಲಿ
ಇದು ನನ್ನ‌ ಜಯವಲ್ಲ. ನನಗೆ ಮತಹಾಕಿದ ಮತದಾರರ ಜಯವಾಗಿದೆ. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಉತ್ತಮ‌ ಕೆಲಸ ಮಾಡಿದ್ದೆ ಹೀಗಾಗಿ ನನ್ನ ಗೆಲವು ಮೊದಲೆ ಗೊತ್ತಿತ್ತು. ಬಿಜೆಪಿಯವರು ಚುನಾವಣೆಯ‌ ಸಮಯದಲ್ಲಿ ಸೀರೆ ಬೆಳ್ಳಿ ನಾಣ್ಯ ಕೊಟ್ಟಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ ರಾಜ್ಯ ಸಚಿವ ಪ್ರಭು ಚೌಹಾನ್ ಮತದಾರರಿಗೆ ಕೊಟ್ಟಿದ್ದರು. ಸೀರೆಯನ್ನ ಉಟ್ಟುಕೊಂಡು ಬೆಳ್ಳಿಯ ನಾಣ್ಯ ಹಣೆಗೆ ಹಚ್ಚಿಕೊಂಡು ಒಬ್ಬ ದೆಹಲಿಗೆ ಇನ್ನೊಬ್ಬರು ಬೆಂಗಳೂರಿಗೆ ಹೋಗಲಿ ಎಂದು ಬೀದರ್​ನಲ್ಲಿ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಕಾರ್ಯ ಪೂರ್ಣವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಎಸ್ ರವಿಗೆ ಗೆಲುವು ಲಭಿಸಿದೆ. ಒಟ್ಟು ಚಲಾವಣೆಯಾಗಿರುವ ಮತಗಳು 3,919 ಆಗಿವೆ. ಸಿಂಧು ಮತಗಳು 3,856 ಹಾಗೂ ಅಸಿಂಧು ಮತಗಳು 56 ಆಗಿವೆ. ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ಪಡೆದ ಮತಗಳು 2,262, ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಪಡೆದ ಮತಗಳು 1,540 ಹಾಗೂ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ 54 ಮತಗಳನ್ನು ಪಡೆದುಕೊಂಡಿದ್ದಾರೆ. ಎಸ್ ರವಿ ಗೆಲುವಿನ ಅಂತರ 722 ಮತಗಳು ಆಗಿದೆ.