ಬೆಳಗಾವಿ: ಬಾರ್ ಗೆ ನುಗ್ಗಿ ಬಾಗಿಲು ಬಂದ್ ಮಾಡಿಸಿದ ಜಿಲ್ಲಾಧಿಕಾರಿ

ಬೆಳಗಾವಿ : ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಶನಿವಾರ ಬೆಳಗ್ಗೆ ಕಾರಿನಿಂದಿಳಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲರು ನೇರವಾಗಿ ಪಕ್ಕದಲ್ಲೇ ಇರುವ ಆನಂದ ಬ್ರ್ಯಾಂಡಿ ಶಾಪ್ ಗೆ ತೆರಳಿ ಲೈಸೆನ್ಸ್, ಲಭ್ಯವಿರುವ ಮದ್ಯದ ಸಂಗ್ರಹ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲನೆ ಕೈಗೊಂಡರು.
ಆನಂದ ಬ್ರ್ಯಾಂಡಿ ಅಂಗಡಿ ಮತ್ತು ಲಕ್ಷ್ಮೀ ಬಾರ್ ಮತ್ತು ರೆಸ್ಟೋರೆಂಟ್ ಗೆ ಸ್ವತಃ ತೆರಳಿ ಪರಿಶೀಲನೆ ಕೈಗೊಂಡ ಜಿಲ್ಲಾಧಿಕಾರಿ ಗಳು ಖುದ್ದಾಗಿ ಕೆಲವು ಮದ್ಯದ ಬಾಟಲ್ ಗಳನ್ನು ತೆಗೆದುಕೊಂಡು ಅವುಗಳ ಗುಣಮಟ್ಟ ಪರಿಶೀಲಿಸುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜೊತೆಗೆ ಆಗಮಿಸಿದ ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಗ್ರಾಮದಲ್ಲಿರುವ ಮದ್ಯ ಮಾರಾಟ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಸದ್ಯಕ್ಕೆ ಮದ್ಯದ ಅಂಗಡಿಗಳನ್ನು ಸ್ಥಗಿತಗೊಳಿಸಲಾಗಿದ್ದು, ನಿಯಮಗಳ ಉಲ್ಲಂಘನೆಯ ಕುರಿತು ಕೂಲಂಕಶವಾಗಿ ಪರಿಶೀಲನೆ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಜಿಪಂ ಸಿಇಓ ದರ್ಶನ್, ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ ಉಪಸ್ಥಿತರಿದ್ದರು.