ಕರ್ನಾಟಕದ ಕೆಲವೆಡೆ ಮತ್ತೆ ಮಳೆ- 7 ಜಿಲ್ಲೆಗೆ ಯೆಲ್ಲೋ ಅಲರ್ಟ್
ಬೆಂಗಳೂರು, ನವೆಂಬರ್ 10: ಕರ್ನಾಟಕ ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಳ್ಳುವ ಲಕ್ಷಣಗಳು ಇದೆ. ಹಲವು ಜಿಲ್ಲೆಗಳಿಗೆ ಗುಡುಗು ಸಹಿತ ಭಾರಿ ಮಳೆ ಆಗಲಿದ್ದು, ಒಟ್ಟು 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ವರದಿ ಪ್ರಕಾರ, ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಈಶಾನ್ಯ ಮಾರುತಗಳು ಸಕ್ರಿಯವಾಗಿವೆ.
ಇದೇ ಅವಧಿಯಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ನವೆಂಬರ್ 14ರಂದು ಸಹ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನಾದ್ಯಂತ ಒಣ ಹವೆ ಮುಂದುವರಿಯಲಿದೆ. ಈ ಭಾಗದಲ್ಲಿ ಮಳೆ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ ದಾಖಲು
ರಾಜ್ಯದ ಗರಿಷ್ಠ ತಾಪಮಾನ ಕಳೆದ 24ಗಂಟೆಯಲ್ಲಿ ಹೊನ್ನಾವರ, ಗೋಕರ್ಣ, ಕಾರವಾರದಲ್ಲಿ 35ಡಿಗ್ರಿ ಸೆಲ್ಸಿಯಸ್ ದಾಖಳಾಗಿದೆ. ಉಳಿದಂತೆ ಮಂಗಳೂರು ಮತ್ತು ಹಾಸನ 34 ಡಿಗ್ರಿ ಸೆಲ್ಸಿಯಸ್, ಬಳ್ಳಾರಿ, ಕಲಬುರಗಿ, ಹಂಪಿಯಲ್ಲಿ ತಲಾ 33ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾಜ್ಯದ ಅತ್ಯಂತ ಕನಿಷ್ಠ ತಾಪಮಾನ ಬೆಳಗಾವಿ ಮತ್ತು ಗದಗನಲ್ಲಿ ತಲಾ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದಿನ 48 ಗಂಟೆ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಕವಿದ ವಾತಾವರಣ ಉಂಟಾಗಲಿದೆ. ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಸೃಷ್ಟಿಯಾಗಲಿದೆ.