ಮೂರು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವದಂಪತಿ ಶವವಾಗಿ ಪತ್ತೆ, ಆರತಕ್ಷತೆಗೂ ಮುನ್ನವೇ ಘೋರ ದುರಂತ
ರಾಯ್‌ಪುರ (ಛತ್ತೀಸ್‌ಗಢ) : ಫೆಬ್ರವರಿ 19 ರಂದು ಛತ್ತೀಸ್‌ಗಢದ ರಾಯ್‌ಪುರದಲ್ಲಿ ಮದುವೆಯಾಗಿದ್ದ ನವವಿವಾಹಿತ ದಂಪತಿಗಳು ಆರತಕ್ಷತೆಗೂ ಮುನ್ನವೇ ಶವವಾಗಿ ಪತ್ತೆಯಾಗಿದ್ದಾರೆ.
ಮಂಗಳವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದೆ.
ರಾಯ್‌ಪುರದ ತಿಕ್ರಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಿಜ್‌ನಗರದಲ್ಲಿ ಈ ಘಟನೆ ನಡೆದಿದೆ ಎಂದು ತಿಕ್ರಪಾರ ಸ್ಟೇಷನ್ ಹೌಸ್ ಅಧಿಕಾರಿ (ಎಸ್‌ಎಚ್‌ಒ) ಅಮಿತ್ ಬೆರಿಯಾ ತಿಳಿಸಿದ್ದಾರೆ.
ಮೃತರನ್ನು ಅಸ್ಲಾಂ (24) ಮತ್ತು ಕಹ್ಕಾಶಾ ಬಾನೋ (22) ಎಂದು ಗುರುತಿಸಲಾಗಿದೆ. ಫೆಬ್ರವರಿ 19 ರಂದು ರಾಯ್‌ಪುರದಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನೆರವೇರಿತ್ತು.
ಆರತಕ್ಷತೆಗೆ ಮುಂಚಿತವಾಗಿ, ದಂಪತಿಗಳು ಕಾರ್ಯಕ್ರಮಕ್ಕೆ ಸಿದ್ಧರಾಗುತ್ತಿದ್ದರು. ಈ ವೇಳೆ, ವಧುವಿನ ಕಿರುಚಾಟ ಕೇಳಿ ವರನ ತಾಯಿ ತಮ್ಮ ಕೋಣೆಗೆ ಧಾವಿಸಿ ನೋಡಿದಾಗ ಒಳಗಿನಿಂದ ಬಾಗಿಲು ಹಾಕಿರುವುದು ಕಂಡು ಬಂದಿದೆ. ದಂಪತಿಗಳು ಪ್ರತಿಕ್ರಿಯಿಸದಿದ್ದಾಗ, ಸಂಬಂಧಿಕರು ಬಾಗಿಲು ಹೊಡೆದು ಕೋಣೆಯೊಳಗೆ ಪ್ರವೇಶಿಸಿದಾಗ ದಂಪತಿಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡುಬಂದಿದೆ.
ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲು ವರದಿಗಾಗಿ ಕಾಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.