ಭಾರತ ತಂಡವನ್ನು ನೋಡಿ ಕಲಿಯಿರಿ: ಪಾಕಿಸ್ತಾನ ತಂಡವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಕ್ರಿಕೆಟಿಗ

ಭಾರತ ತಂಡವನ್ನು ನೋಡಿ ಕಲಿಯಿರಿ: ಪಾಕಿಸ್ತಾನ ತಂಡವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಕ್ರಿಕೆಟಿಗ

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ನೀಡುತ್ತಿರುವ ಪ್ರದರ್ಶನವನ್ನು ನೋಡಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಕೂಡ ಭಾರತ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪಾಕಿಸ್ತಾನ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನ್ಯೂಜಿಲೆಂಡ್ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳುವ ಮುನ್ನ ಪಾಕಿಸ್ತಾನದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಈ ಏಕದಿನ ಸರಣಿಯನ್ನು ನ್ಯೂಜಿಲೆಂಡ್ 2-1 ಅಂತರದಲ್ಲಿ ಗೆದ್ದುಕೊಂಡಿತ್ತು. ತವರಿನಲ್ಲೇ ಸರಣಿ ಗೆಲ್ಲಲು ವಿಫಲವಾದ ಪಾಕಿಸ್ತಾನದ ವಿರುದ್ಧ ಈಗ ಮಾಜಿ ಕ್ರಿಕೆಟಿಗರು ಕಿಡಿ ಕಾರುತ್ತಿದ್ದಾರೆ.

ಭಾರತ ನ್ಯೂಜಿಲೆಂಡ್ ವಿರುದ್ದದ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದ ಬಳಿಕ ಮಾತನಾಡಿರುವ ಡ್ಯಾನಿಶ್ ಕನೇರಿಯಾ, ಪಾಕಿಸ್ತಾನದ ತಂಡವನ್ನು ಪ್ರಶ್ನೆ ಮಾಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಭಾರತ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾದರೆ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ತಂಡವಾಗಲಿದೆ. ಏಕದಿನ ವಿಶ್ವಕಪ್‌ ಹತ್ತಿರವಾಗುತ್ತಿರುವ ಸಮಯದಲ್ಲಿ ಭಾರತ ತಂಡ ನೀಡುತ್ತಿರುವ ಪ್ರದರ್ಶನ ಎದುರಾಳಿ ತಂಡಗಳ ನಿದ್ದೆಗೆಡಿಸುವಲ್ಲಿ ಯಶಸ್ವಿಯಾಗಿದೆ.

ಪಾಕಿಸ್ತಾನದ ಕ್ರಿಕೆಟ್ ಗುಣಮಟ್ಟ ಕುಸಿತ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಡ್ಯಾನಿಶ್ ಕನೇರಿಯಾ ಪಾಕ್ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತ ತಂಡಕ್ಕೆ ಹೋಲಿಸಿದರೆ ಪಾಕಿಸ್ತಾನ ತಂಡದ ಕ್ರಿಕೆಟ್‌ನ ಗುಣಮಟ್ಟ ಕಡಿಮೆಯಾಗಿದೆ ಎಂದು ದೂರಿದ್ದಾರೆ.

"ಪಾಕಿಸ್ತಾನ ಟಿ20 ತಂಡದ ನಾಯಕತ್ವದ ಬಗ್ಗೆ ಮತ್ತು ಬಾಬರ್ ಅಜಮ್‌ರಿಂದ ನಾಯಕತ್ವವನ್ನು ಕಿತ್ತುಕೊಂಡು ಯಾರಿಗೆ ಕೊಡಬೇಕು ಎಂದು ಯೋಚಿಸಬೇಕು. ಪಾಕಿಸ್ತಾನ ತಂಡ ಏಕದಿನ ಪಂದ್ಯಗಳಲ್ಲಿ ಏನಾದರೂ ದೊಡ್ಡ ಮೊತ್ತವನ್ನು ಗಳಿಸಿದೆಯೇ? ಪಾಕ್‌ ತಂಡದ ಯಾರಾದರೂ ಆಟಗಾರ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ್ದಾರಾ? ಉತ್ತಮ ಪ್ರದರ್ಶನ ನೀಡಿದ್ದೇವಾ? ಇಲ್ಲ" ಎಂದು ಹೇಳಿದ್ದಾರೆ.

ತವರಿನಲ್ಲೇ ಉತ್ತಮ ಪ್ರದರ್ಶನ ನೀಡುತ್ತಿಲ್ಲ

ರಾಯ್‌ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಹುಲ್ಲಿನ ಪಿಚ್‌ ನಿರ್ಮಿಸಿದ್ದು, ಭಾರತದ ಬೌಲರ್ ಗಳಿಗೆ ಸಾಕಷ್ಟು ಸಹಾಯ ನೀಡಿದ್ದಕ್ಕೆ ಡ್ಯಾನಿಶ್ ಕನೇರಿಯಾ ಮೆಚ್ಚುಗೆ ಸೂಚಿಸಿದ್ದಾರೆ. ಪಾಕಿಸ್ತಾನ ತಂಡ ತವರಿನಲ್ಲಿ ಉತ್ತಮ ಪಿಚ್‌ಗಳನ್ನು ನಿರ್ಮಿಸಲು ಹೆಣಗಾಡುತ್ತಿದೆ. ತವರಿನ ಪರಿಸ್ಥಿತಿಗಳ ಲಾಭ ಹೇಗೆ ಪಡೆಯಬೇಕು ಎನ್ನುವುದನ್ನು ಭಾರತ ತಂಡವನ್ನು ನೋಡಿ ಕಲಿಯಬೇಕಿದೆ ಎಂದು ಹೇಳಿದ್ದಾರೆ.

"ನಾವು ಇದನ್ನೆಲ್ಲಾ ಕಲಿಯಬೇಕಿದೆ, ಅವರ ತವರಿನ ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಭಾರತ ಮತ್ತು ಇತರೆ ದೇಶಗಳನ್ನು ನೋಡಿ ಕಲಿಯಬೇಕು. ಆದರೆ, ನಾವು ನಮ್ಮ ಪರಿಸ್ಥಿತಿಯ ಲಾಭ ಪಡೆಯಲು ಹೆದರುತ್ತಿದ್ದೇವೆ" ಎಂದು ಹೇಳಿದರು.