ಸದ್ಯಕ್ಕೆ ಬಿಡುವು ಕೊಡದ ಮಳೆ ಮತ್ತೆ ಒಂದು ವಾರ ಮುಂದುವರಿಯುವ ಸಾಧ್ಯತೆ
ಬೆಂಗಳೂರು- ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಸದ್ಯಕ್ಕೆ ಬಿಡುವು ಕೊಡುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹೆಚ್ಚು ಕಡಿಮೆ ಇನ್ನು ಒಂದು ವಾರ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ.
ರಾಜ್ಯದ ಒಳನಾಡಿನಲ್ಲಿ ಮಳೆಯಾಗುತ್ತಿದ್ದು, ಕೆಲವೆಡೆ ವ್ಯಾಪಕ ಪ್ರಮಾಣದ ಮಳೆಯಾಗಿದ್ರ ಮತ್ತೆ ಕೆಲವೆಡೆ ಸಾಧಾರಣ ಮಳೆಯಾಗಿದೆ.
ಉಳಿದಂತೆ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿರುವ ವರದಿಯಾಗಿದೆ. ಮೇಲ್ಮೈ ಸುಳಿ ಗಾಳಿಯಿಂದಾಗಿ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಆಗಾಗ್ಗೆ ಮಳೆಯಾಗುವ ಲಕ್ಷಣಗಳಿವೆ.
ಆನೇಕಲ್‍ನಲ್ಲಿ 89 ಮಿ.ಮೀ, ಆನೇಕಲ್ ತಾಲ್ಲೂಕಿನ ಸೂರಗಜ್ಜಕ್ಕನಹಳ್ಳಿಯಲ್ಲಿ 64.5 ಮಿ.ಮೀ, ಹೆಣ್ಣಾಗರದಲ್ಲಿ 69, ಕನಕಪುರ ತಾಲ್ಲೂಕಿನ ಕೋಣಗಾನಹಳ್ಳಿಯಲ್ಲಿ 74.5 ಮಿ.ಮೀ, ಚಾಕನಹಳ್ಳಿಯಲ್ಲಿ 85 ಮಿ.ಮೀ, ರಾಮನಗರ ತಾಲ್ಲೂಕಿನ ಹುಲಿಕೆರೆ ಗುನ್ನೂರು 72.5, ಚನ್ನಪಟ್ಟಣ ತಾಲ್ಲೂಕಿನ ಭೂಹಳ್ಳಿಯಲ್ಲಿ 68 ಮಿ.ಮೀ ಮಳೆಯಾಗಿದೆ.
ಮಳವಳ್ಳಿ ತಾಲ್ಲೂಕಿನ ದುಗ್ಗನ ಹಳ್ಳಿಯಲ್ಲಿ 65, ಪಾಂಡವಪುರ ತಾಲ್ಲೂಕಿನ ಲಕ್ಷ್ಮಿಸಾಗರ 73.5 ಮಿ.ಮೀ, ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿಯಲ್ಲಿ 66.5 ಮಿ.ಮೀ, ಮಂಡ್ಯ ತಾಲ್ಲೂಕಿನ ಮುತ್ತೆಗೆರೆ 65 ಮಿ.ಮೀ, ಕೆ.ಆರ್.ಪೇಟೆ ತಾಲ್ಲೂಕಿನ ಆಳಂಬಿಕಾವಲಿನಲ್ಲಿ 64.5 ಮಿ.ಮೀ, ಜಿ.ಮಲ್ಲಿಗೆರೆಯಲ್ಲಿ 60.5 ಮಿ.ಮೀ,ಚಿತ್ರದುರ್ಗದಲ್ಲಿ 127.5 ಮಿ.ಮೀ, ಬಂಟ್ವಾಳದಲ್ಲಿ 125.5 ಮಿ.ಮೀ, ವಿಜಯಪುರ ತಾಲ್ಲೂಕಿನ ಗೊಣಸಗಿಯಲ್ಲಿ 70 ಮಿ.ಮೀ, ಕೊಳ್ಳೆಗಾಲ ತಾಲ್ಲೂಕಿನ ಹುಗ್ಗಿಯಂನಲ್ಲಿ 75.5 ಮಿ.ಮೀನಷ್ಟು ಮಳೆಯಾಗಿರುವ ವರದಿಯಾಗಿದೆ.
ಹವಾಮಾನ ಮುನ್ಸೂಚನೆ ಪ್ರಕಾರ ಅ.20ರವರೆಗೂ ಹೆಚ್ಚು ಕಡಿಮೆ ಇದೇ ರೀತಿ ಮಳೆ ರಾಜ್ಯದಲ್ಲಿ ಮುಂದುವರೆಯಲಿದೆ. ಅ.21ರ ನಂತರ ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ 31ರಿಂದ 40 ಮಿ.ಮೀವರೆಗೂ ಮಧ್ಯಮ ಪ್ರಮಾಣದ ಮಳೆಯಾಗುವ ಲಕ್ಷಣಗಳಿವೆ. ಅ.25ರವರೆಗೂ ಮಳೆ ಮುಂದುವರೆಯಲಿದೆ. ರಾಜ್ಯದಲ್ಲಿ ವ್ಯಾಪಕ ಪ್ರಮಾಣದ ಮಳೆ ಮೂರ್ನಾಲ್ಕು ದಿನಗಳ ಕಾಲ ಮುಂದುವರೆಯುವ ಸೂಚನೆಗಳಿವೆ.
ಆನಂತರ ಮಳೆ ಮುಂದುವರೆದರೂ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ. ಮುಂಗಾರು ಪೂರ್ವ ಮಳೆಯಂತೆ ಗುಡುಗು, ಮಿಂಚು, ಸಿಡಿಲಿನ ಆರ್ಭಟದೊಂದಿಗೆ ಕೆಲವೆಡೆ ಮಳೆಯಾಗುತ್ತಿದೆ. ಅದರಲ್ಲೂ ಸಂಜೆ ಹಾಗೂ ರಾತ್ರಿ ವೇಳೆ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದೆ ಎಂದು ಹೇಳಿದರು.
ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೂ ನಿಲ್ಲುವುದಿಲ್ಲ. ಸಾಧಾರಣ ಮಳೆ ಮುಂದುವರೆಯುತ್ತಲೇ ಇರುತ್ತದೆ. ಮಲೆನಾಡು ಭಾಗದಲ್ಲೂ ಅ.25ರವರೆಗೂ ಮಳೆ ಮುಂದುವರೆಯುವ ಸೂಚನೆಗಳಿವೆ.
ಮುಂಗಾರು ಹಂಗಾಮಿನ ವಿವಿಧ ಬೆಳೆಯ ರೈತರು ಮಳೆಯ ಬಿಡುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದರು.