ಬಬಲೇಶ್ವರ: ಕಾಂಗ್ರೆಸ್ ಸಮಾವೇಶಕ್ಕೆ ಬರುವಂತೆ ಸೀರೆ, ಮೊಬೈಲ್ ಫೋನ್ ಹಂಚಿದ ಆರೋಪ

ಬಬಲೇಶ್ವರ: ಕಾಂಗ್ರೆಸ್ ಸಮಾವೇಶಕ್ಕೆ ಬರುವಂತೆ ಸೀರೆ, ಮೊಬೈಲ್ ಫೋನ್ ಹಂಚಿದ ಆರೋಪ

ಬಲೇಶ್ವರ: ಪಟ್ಟಣದಲ್ಲಿ ಫೆ.22ರಂದು ನಡೆಯಲಿರುವ ಕಾಂಗ್ರೆಸ್‌ 'ಪ್ರಜಾಧ್ವನಿ' ಸಮಾವೇಶಕ್ಕೆ ಬರುವಂತೆ ಮಹಿಳೆಯರಿಗೆ ಸೀರೆ ಹಾಗೂ ಮೊಬೈಲ್‌ ಫೋನ್‌ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

₹300 ಬೆಲೆ ಬಾಳುವ ಸೀರೆ ಹಾಗೂ ₹1200 ಬೆಲೆ ಬಾಳುವ ಮೊಬೈಲ್‌ ಅನ್ನು ನೀಡಲಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಕಾಂಗ್ರೆಸ್‌ ಮಹಿಳಾ ಮುಖಂಡರು ಪಟ್ಟಣಕ್ಕೆ ಭಾನುವಾರ ಕಾರುಗಳಲ್ಲಿ ಬಂದು, ಮನೆಮನೆಗೆ ಭೇಟಿ ನೀಡಿ ರಾಜಾರೋಷವಾಗಿ ಸೀರೆ, ಮೊಬೈಲ್‌ಗಳನ್ನು ಮಹಿಳೆಯರ ಕೈಗಿತ್ತು, ಸಮಾವೇಶಕ್ಕೆ ಬರುವಂತೆ ಆಹ್ವಾನ ನೀಡುತ್ತಿರುವ ಫೋಟೊಗಳು ಮತ್ತು ವಿಡಿಯೊ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹಂಚಿಕೆ ನಿಜ: ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳಾ, 'ಬಬಲೇಶ್ವರದಲ್ಲಿ ಮನೆ, ಮನೆಗಳಿಗೆ ಸೀರೆಗಳನ್ನು ಹಂಚಿರುವುದು ನಿಜ. ಫೆ. 22ರಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಬಬಲೇಶ್ವರಕ್ಕೆ ಬರುತ್ತಿದ್ದು, ಅವರ ಅಭಿಮಾನದ ಮೇರೆಗೆ ಅಂದು ಎಲ್ಲ ಸ್ತ್ರೀ ಶಕ್ತಿ ಸಂಘಟನೆಯ ಸದಸ್ಯೆಯರು ಸಮವಸ್ತ್ರದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಹಂಚಿದ್ದೇವೆ. ಚುನಾವಣೆ ಉದ್ದೇಶದಿಂದ ಹಂಚಿಕೆ ಮಾಡಿಲ್ಲ. ಸೀರೆ, ಮೊಬೈಲ್‌ ಕಾಂಗ್ರೆಸ್‌ ಮುಖಂಡರಿಗೆ ಸೇರಿದ್ದಲ್ಲ' ಎಂದು ಹೇಳಿದರು.

ಹಿಟ್ಟಿನ ಗಿರಣಿ ಹಂಚಿಕೆ: ಈಗಾಗಲೇ ಬಬಲೇಶ್ವರ ಕ್ಷೇತ್ರದಲ್ಲಿ ರಿಯಾಯಿತಿ ದರದಲ್ಲಿ ಮನೆ ಬಳಕೆಯ ಹಿಟ್ಟಿನ ಗಿರಣಿಗಳನ್ನು ಎಂ.ಬಿ.ಪಾಟೀಲ ಫೌಂಡೇಶನ್‌ನಿಂದ ಹಂಚುತ್ತಿರುವ ಆರೋಪ ಕೇಳಿಬಂದಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮತ್ತು ಅವರ ಸಹೋದರ ವಿಧಾನ ಪರಿಷತ್‌ ಸುನೀಲಗೌಡ ಪಾಟೀಲ ಅವರ ಭಾವಚಿತ್ರ ಇರುವ ಹಿಟ್ಟಿನ ಗಿರಣಿಗಳನ್ನು ಅವರ ಅಭಿಮಾನಿಗಳು ಹಂಚಿಕೆ ಮಾಡಿದ್ದಾರೆ.

ಕಚೇರಿಯಿಂದ ಸ್ಪಷ್ಟನೆ: 'ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಎಂ. ಬಿ. ಪಾಟೀಲ ಮತ್ತು ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲರ ಭಾವಚಿತ್ರ ಇರುವ ಹಿಟ್ಟಿನ ಗಿರಣಿಗಳನ್ನು ವೈಯಕ್ತಿಕವಾಗಿ ಕೆಲವರು ನೀಡುತ್ತಿದ್ದು, ಇದಕ್ಕೂ ಶಾಸಕರಾಗಲಿ ಹಾಗೂ ಶಾಸಕರ ಕಚೇರಿಗಾಗಲಿ ಯಾವುದೇ ರೀತಿಯಿಂದ ಸಂಬಂಧ ಇರುವುದಿಲ್ಲ' ಎಂದು ಶಾಸಕ ಎಂ.ಬಿ.ಪಾಟೀಲರ ಕಚೇರಿಯಿಂದ ಪ್ರಕಟಣೆ ನೀಡಲಾಗಿತ್ತು