ಮಳಲಿ ಮಸೀದಿ ತೀರ್ಪು ನ. ೯ಕ್ಕೆ ಮುಂದೂಡಿಕೆ

ಮಳಲಿ ಮಸೀದಿ ತೀರ್ಪು ನ. ೯ಕ್ಕೆ ಮುಂದೂಡಿಕೆ

ಮಂಗಳೂರು, ಅ. ೧೭- ಮಳಲಿ ಮಸೀದಿ ಕಟ್ಟಡದಲ್ಲಿ ದೇವಾಲಯ ಹೋಲುವ ರಚನೆಗಳು ಕಂಡು ಬಂದ ಪ್ರಕರಣದ ತೀರ್ಪನ್ನು ವಿಚಾರಣೆಯನ್ನು ಮಂಗಳೂರು ನ್ಯಾಯಾಲಯ ನ. ೯ಕ್ಕೆ ಮುಂದೂಡಿದೆ.ಕೋರ್ಟ್ ಕಮೀಷನರ್ ಮೂಲಕ ಸರ್ವೇ ಮಾಡುವಂತೆ ವಿ.ಎಚ್. ಪಿ ಮನವಿ ಮಾಡಿತ್ತು. ಆ ಬಳಿಕ ಮಸೀದಿಯ ಜಾಗಕ್ಕೆ ಸಂಬಂಧಿಸಿದಂತೆ ವಕ್ಫ್ ಮತ್ತು ಸಿವಿಲ್ ನ್ಯಾಯಾಲಯದ ಅಧಿಕಾರದ ಬಗ್ಗೆ ವಾದ -ವಿವಾದ ನಡೆದಿತ್ತು. ಈ ಕುರಿತ ಆದೇಶವನ್ನು ನ್ಯಾಯಾಲಯ ಇಂದು ನಿಗದಿಪಡಿಸಿತ್ತು. ಆದರೆ ಈಗ ಆದೇಶವನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಈ ಹಿಂದೆ ಸೆ. ೨೭ ರಂದು ಮಂಗಳೂರು ನ್ಯಾಯಾಲಯ ತೀರ್ಪುನ್ನು ಮುಂದೂಡಿತ್ತು.ಮಂಗಳೂರು ಹೊರವಲಯದ ಗಂಜಿಮಠದ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದಲಿ ದರ್ಗಾವನ್ನು ನವೀಕರಣ ಮಾಡಲು ಕೆಡವಿದಾಗ ಹಿಂದೂ ದೇಗುಲ ಹೋಲುವ ಆಕೃತಿಯ ವಾಸ್ತು ಶಿಲ್ಪದ ಕಟ್ಟಡ ಪತ್ತೆಯಾಗಿತ್ತು.
ನಂತರದ ದಿನಗಳಲ್ಲಿ ಅಷ್ಪಮಂಗಲ ಪ್ರಶ್ನೆಗೆ ವಿಶ್ವಹಿಂದೂ ಪರಿಷತ್ ಮುಂದಾಗಿತ್ತು. ಆದರೆ ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ತಾಂಬೂಲ ಪ್ರಶ್ನೆ ವಿಧಾನದಿಂದ ಪರಿಶೀಲಿಸಿದಾಗಿ ದೈವ ಸಾನಿಧ್ಯವಿರುವುದು ಗೋಚರಿಸಿತು ಎಂದು ಜ್ಯೋತಿಷಿ ಗೋಪಾಲಕೃಷ್ಣ ಫಣ್ಕರ್ ಪ್ರತಿಕ್ರಿಯಿಸಿದ್ದರು.ಮಳಲಿಯಲ್ಲಿರುವುದು ಮಸೀದಿ ಎಂದು ಮತ್ತೊಮ್ಮೆ ಸಾಬೀತುಪಡಿಸುವ ಅಗತ್ಯವಿಲ್ಲ. ಸರ್ಕಾರಿ ವಕ್ಫ್ ದಾಖಲೆ ಪ್ರಕಾರವೇ ಅಲ್ಲಿ ಮಸೀದಿಯಿರುವುದು ದಾಖಲಾಗಿದೆ. ಮಸೀದಿ ಎಂದರೆ ವಕ್ಫ್ ಕಾನೂನಿಯ ಪ್ರಕಾರ ಪ್ರಾರ್ಥನಾ ಸ್ಥಳ ಎಂದು ಅರ್ಥ. ಅಂತಹ ಸ್ಥಳವನ್ನು ನಿಯಮಗಳ ಪ್ರಕಾರ ವಕ್ಫ್ ಆಸ್ತಿಯೆಂದು ಕರೆಯುತ್ತಾರೆ ಎಂದು ಮಸೀದಿ ಪರ ವಕೀಲ ಎಂ.ಪಿ ಶೆಣೈ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.ಒಂದು ಸ್ಥಳವನ್ನು ಪುರಾತನ ಸ್ಮಾರಕ ಎಂದು ಹೇಳಲು ಕೇಂದ್ರ ಸರ್ಕಾರದ ಅಧಿಸೂಚನೆ ಇರಬೇಕು. ಆದರೆ ಮಳಲಿ ಮಸೀದಿ ಮೇಲೆ ಯಾವುದೇ ಗೆಜೆಟ್ ನೋಟೀಫೀಕೆಶನ್ ಇರಲಿಲ್ಲ. ಹೀಗಿರುವಾಗ ಇದನ್ನು ಪುರಾತನ ಸ್ಮಾರಕ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ವಿ.ಹೆಚ್.ಪಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕು ಎಂದು ವಾದಿಸಿದ್ದರು. ಈಗ ನ್ಯಾಯಾಲಯ ನೀಡಲಿರುವ ತೀರ್ಪು ತೀವ್ರ ಕುತೂಹಲ ಕೆರಳಿಸಿದೆ.