ಮಹಿಳಾ ಹೋರಾಟಗಾರರ ಮನೆಗೆ ನೋಟಿಸ್‌ ನೀಡಿದ ಪ್ರಕರಣ: ಅಧಿಕಾರಿ ತಕ್ಷಣ ಅಮಾನತಿಗೆ ಐವನ್ ಡಿಸೋಜಾ ಆಗ್ರಹ

ಮಹಿಳಾ ಹೋರಾಟಗಾರರ ಮನೆಗೆ ನೋಟಿಸ್‌ ನೀಡಿದ ಪ್ರಕರಣ: ಅಧಿಕಾರಿ ತಕ್ಷಣ ಅಮಾನತಿಗೆ ಐವನ್ ಡಿಸೋಜಾ ಆಗ್ರಹ

ಮಂಗಳೂರು, ಅ. 17: ಅಕ್ರಮ ಟೋಲ್ ಗೇಟ್ ವಿರೋಧಿ ಹೋರಾಟಗಾರರ ಮನೆಗೆ ರಾತ್ರಿ ಹೊತ್ತು ಪೊಲೀಸರು ತೆರಳಿ ನೋಟಿಸ್ ನೀಡಿರುವುದು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ. ಇದಕ್ಕೆ ಸಂಬಂಧಿಸಿದ ಪೊಲೀಸ್ ಅಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಆಗ್ರಹಿಸಿದ್ದಾರೆ.‌

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗ ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದರು.

ಪೊಲೀಸ್ ಅಧಿಕಾರಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಪೊಲೀಸರ ವಿರುದ್ಧದ ಹೋರಾಟವನ್ನು ಮುಂದುವರಿಸಲಿದೆ ಎಂದರು.

ಅಕ್ರಮ ಟೋಲ್‌ಗೇಟ್‌ಗಳು ಜನರ ಕಿಸೆಗಳ್ಳತನ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಹೊಟ್ಟೆ ತುಂಬಿಸಲು ಕಾರಣವಾಗಿದೆ. ಲೋಕಸಭೆಯಲ್ಲಿ ಕೇಂದ್ರದ ಸಾರಿಗೆ ಸಚಿವರೇ ಸುರತ್ಕಲ್ ಸೇರಿದಂತೆ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವ ಟೋಲ್‌ಗೇಟ್‌ಗಳಿವೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಿದ್ದೂ ಅದನ್ನು ತೆರವುಗೊಳಿಸಲು ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದರ ಉದ್ದೇಶವೇನು? ಅದರ ಹಿಂದಿರುವ ಶಕ್ತಿ ಯಾವುದು ಎಂಬ ಬಗ್ಗೆ ಸ್ಥಳೀಯ ಸಂಸದರು, ಕೇಂದ್ರದ ಸಚಿವರು ಉತ್ತರಿಸಬೇಕು ಎಂದರು.

ಯಾವುದೇ ರೀತಿಯಲ್ಲಿ ಹತ್ತಿಕ್ಕಲು ಮುಂದಾದರೂ ನಾಳೆ ನಡೆಯಲಿರುವ ಸಾರ್ವಜನಿಕ ಪ್ರತಿಭಟನೆ ನಡೆಯಲಿದೆ. ಅದಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲವನ್ನೂ ನೀಡಲಿದೆ. ಗುಂಡಿಗೆ ಎದೆಯೊಯ್ಡಲು, ಜೈಲಿಗೆ ಹೋಗಲೂ ನಾವು ಸಿದ್ಧ. ಸಾರ್ವಜನಿಕ ಹಿತಾಸಕ್ತಿಯನ್ನು ಆಡಳಿತ ನಡೆಸುವ ಜನಪ್ರತಿನಿಧಿಗಳು ಬಯಸುವುದಾದರೆ ನಾಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಟೋಲ್ ಬಂದ್ ಮಾಡಿಸುವ ಕೆಲಸ ಮಾಡಬೇಕು. ಇಲ್ಲವಾದರೆ ರಾಜೀನಾಮೆ ನೀಡಿ ಎಂದು ಐವನ್ ಡಿಸೋಜಾ ಸಂಸದರು ಹಾಗೂ ಶಾಸಕರಿಗೆ ಸವಾಲೆಸೆದರು.

ಹೆಜಮಾಡಿ ಟೋಲ್ ಗೇಟ್ ಆದ ಬಳಿಕ ಸುರತ್ಕಲ್ ಟೋಲ್ ಅಕ್ರಮ ಎಂಬುದಾಗಿ ಪರಿಗಣಿಸಲ್ಪಟ್ಟಿತ್ತು. ಆ ಬಳಿಕ ಸುಮಾರು ನಾಲ್ಕು ತಿಂಗಳ ಹಿಂದೆ ಕೇಂದ್ರದ ಸಚಿವರೇ ಲೋಕಸಭೆಯಲ್ಲಿ ಸುರತ್ಕಲ್ ಸೇರಿದಂತೆ 18 ಕಡೆ ಅಕ್ರಮ ಟೋಲ್‌ಗಳಿವೆ ಎಂದು ಸ್ಪಷ್ಟಪಡಿಸಿರುವಾಗ ಅದನ್ನು ಬಂದ್ ಮಾಡಿಸಲು ಹಿಂದೇಟು ಯಾಕೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಕಳ್ಳಿಗೆ ತಾರನಾಥ ಶೆಟ್ಟಿ, ಶಾಹುಲ್ ಹಮೀದ್, ಪ್ರಕಾಶ್ ಸಾಲಿಯಾನ್, ಶುಬೋಧಯ ಆಳ್ವ, ವಿವೇಕ್‌ರಾಜ್, ಜೆ. ಅಬ್ದುಲ್ ಸಲೀಂ, ಸಬಿತಾ ಮಿಸ್ಕಿತ್, ಭಾಸ್ಕರ ರಾವ್, ನಾಗೇಂದ್ರ ಕುಮಾರ್, ಸಿ.ಎಂ. ಮುಸ್ತಫಾ, ಮೀನಾ ಟೆಲ್ಲಿಸ್, ಶಬೀರ್ ಸಿದ್ಧಕಟ್ಟೆ, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

ತಿಂಗಳೊಂದಕ್ಕೆ ಅಕ್ರಮ ಟೋಲ್‌ನಿಂದ 12 ಲಕ್ಷ ರೂ.ನಂತೆ ಕಳೆದ 8 ವರ್ಷಗಳಿಂದ 400 ಕೋಟಿ ರೂ. ಅಕ್ರಮ ಹಣವನ್ನು ಜನರಿಂದ ಸಂಗ್ರಹಿಸಲಾಗಿದೆ. ಅದರ ಲೆಕ್ಕವನ್ನು ಜನರಿಗೆ ನೀಡಬೇಕು. ಅಕ್ರಮ ದುಡ್ಡಿನಿಂದ ನಮಗೆ ಯಾವುದೇ ಸವಲತ್ತು ಬೇಡ. ಜನರ ಹಣವನ್ನು ಲೂಟಿ ಮಾಡಿದ ಬಗ್ಗೆ ಪ್ರಶ್ನಿಸಿದರೆ ನೋಟೀಸು ಕಳುಹಿಸುವುದೆಂದರೆ ಇದನ್ನು ತುರ್ತು ಪರಿಸ್ಥಿತಿ ಎನ್ನದೆ ಇರಲು ಸಾಧ್ಯವಿಲ್ಲ.