ಪುದುಚೇರಿ ವಿಧಾನಸಭಾ ಸ್ಪೀಕರ್ ಆಗಿ ಬಿಜೆಪಿ ಶಾಸಕ ಆರ್.ಸೆಲ್ವಂ ಆಯ್ಕೆ

ಪುದುಚೇರಿ : ಬಿಜೆಪಿ ಶಾಸಕ 'ಎಂಬಲಂ' ಆರ್.ಸೆಲ್ವಂ ಅವರನ್ನು ಪುದುಚೇರಿ ವಿಧಾನಸಭೆಯ ಸ್ಪೀಕರ್ ಆಗಿ ಇಂದು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ವಿಧಾನಸಭಾ ಕಲಾಪ ಆರಂಭವಾದಂತೆ, ಪ್ರೊಟೆಮ್ ಸ್ಪೀಕರ್ ಕೆ.ಲಕ್ಷ್ಮೀನಾರಾಯಣನ್ ಅವರು ಸೆಲ್ವಂ ಅವರನ್ನು ಸಭಾಪತಿಯಾಗಿ ಘೋಷಿಸಿದರು.
ಪುದುಚೇರಿ ಕೇಂದ್ರಾಡಳಿತ ಪ್ರದೇಶದ 21ನೇ ಸ್ಪೀಕರ್ ಆಗಿರುವ ಸೆಲ್ವಂ ಅವರನ್ನು ಮುಖ್ಯಮಂತ್ರಿ ಎನ್.ರಂಗಸ್ವಾಮಿ ಮತ್ತು ವಿಪಕ್ಷ ನಾಯಕ ಆರ್.ಶಿವ ಆಸನದೆಡೆಗೆ ಕರೆದೊಯ್ದರು. ಹಿರಿಯ ಶಾಸಕ ಸೆಲ್ವಂ ಅವರು ಮನವೇಲಿ ಕ್ಷೇತ್ರದ ಶಾಸಕರಾಗಿದ್ದಾರೆ. ಸ್ಪೀಕರ್ ಚುನಾವಣೆಗೆ ಬೇರೆ ಯಾರ ನಾಮಪತ್ರವೂ ಸಲ್ಲಿಕೆಯಾಗಿರಲಿಲ್ಲ ಎನ್ನಲಾಗಿದೆ.
ಪುದುಚೇರಿಯಲ್ಲಿ ಎಐಎನ್ಆರ್ಸಿ ಮತ್ತು ಬಿಜೆಪಿ ಒಕ್ಕೂಟವಾಗಿರುವ ಎನ್ಡಿಎ ಸರ್ಕಾರವಿದೆ. ಎಐಎನ್ಆರ್ಸಿ ನಾಯಕ ಎನ್.ರಂಗಸ್ವಾಮಿ ಅವರು ಮೇ 7 ರಂದು ಸಿಎಂ ಆಗಿ ಅಧಿಕಾರ ಸ್ವೀಕರಿಸಿದರೆ, ಉಳಿದ ಮಂತ್ರಿ ಸಂಪುಟದ ರಚನೆ ಇನ್ನೂ ಬಾಕಿ ಇದೆ.