ಮುರುಘಾ ಶರಣರ ವಿರುದ್ಧ 3ನೇ ಎಫ್‍ಐಆರ್ ದಾಖಲು

ಮುರುಘಾ ಶರಣರ ವಿರುದ್ಧ 3ನೇ ಎಫ್‍ಐಆರ್ ದಾಖಲು

ಚಿತ್ರದುರ್ಗ,ಅ.19- ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಬಾಲ ನ್ಯಾಯ ಕಾಯ್ದೆ 2015ನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಗ್ರಾಮೀಣ ಪೊಲೀಸರು ಮಠಾಧೀಶರ ವಿರುದ್ಧ ಮೂರನೇ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನೀಡಿದ ದೂರಿನ ಮೇರೆಗೆ ಪೂಲೀಸರು, ಮುರುಘಾ ಶರಣರ ಮತ್ತು ಅಂದಿನ ಕಾರ್ಯದರ್ಶಿ ಪರಮಶಿವಯ್ಯ, ಹಾಸ್ಟೆಲ್ ವಾರ್ಡನ್ ಹಾಗೂ ಮಡಿಲು ದತ್ತು ಕೇಂದ್ರದ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುರುಘಾ ಮಠ ನಡೆಸುತ್ತಿರುವ ವಸತಿ ನಿಲಯದ ಆವರಣದಲ್ಲಿ ಪತ್ತೆಯಾದ ಐದು ವರ್ಷದ ಬಾಲಕಿ ಮತ್ತು 17 ವರ್ಷದ ಬಾಲಕಿಯ ವಿವರಗಳನ್ನು ಮಠವು ಉದ್ದೇಶಪೂರ್ವಕವಾಗಿ ಮರೆಮಾಚಿದೆ ಮತ್ತು ಈ ಮೂಲಕ ಬಾಲನ್ಯಾಯ ಕಾಯ್ದೆಯ ಸೆಕ್ಷನ್ 32 ಅನ್ನು ಉಲ್ಲಂಘಿಸಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ದೂರಿನಲ್ಲಿ ಆರೋಪಿಸಿದೆ.

ಇಬ್ಬರು ಬಾಲಕಿಯರ ಬಗ್ಗೆ ಮಡಿಲು ಯೋಜನೆಗೆ ಮಾಹಿತಿ ದಾಖಲಿಸದೆ ಅಕ್ರಮವಾಗಿ ಸೇರಿಸಿಕೊಳ್ಳಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡದೆ ಅಕ್ರಮ ಹಾಗೂ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬರುತ್ತಿದೆ.

ಮುರುಘಾಶ್ರೀ ವಿರುದ್ಧ ಆಗಸ್ಟ್ 26ರಂದು ಪೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಹಾಸ್ಟೆಲ್‍ನಲ್ಲಿದ್ದ ಮಕ್ಕಳನ್ನು ಬೇರೆಡೆ ಸ್ಥಳಾಂತರ ಮಾಡುವ ವೇಳೆ ಇಬ್ಬರು ಬಾಲಕಿಯರು ಪತ್ತೆಯಾಗಿದ್ದಾರೆ. ಬಾಲಕಿಯರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ.

ಅಕ್ಟೋಬರ್ 12ರಂದು ಮಠದ ಹಾಸ್ಟೆಲ್ ಆವರಣದಲ್ಲಿ ಸುಮಾರು ಐದು ವರ್ಷದ ಬಾಲಕಿಯೊಬ್ಬಳು ಪತ್ತೆಯಾಗಿದ್ದಳು. ಆದಾಗ್ಯೂ, ಮಗುವನ್ನು ಮಠದಿಂದ ನಡೆಸಲ್ಪಡುವ ವಿಶೇಷ ದತ್ತು ಕೇಂದ್ರದಲ್ಲಿ ನೋಂದಾಯಿಸಲಾಗಿಲ್ಲ, ಇದು ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.