ಚಾರುಕೀರ್ತಿ ಭಟ್ಟಾರಕ ಶ್ರೀಗಳನ್ನು ಕಾಣಬೇಕಿದ್ದರೆ 12 ವರ್ಷ ಕಾಯಬೇಕಿತ್ತು!
ಕಾರ್ಕಳ: ಹೆಚ್ಚು ಭಕ್ತಿ, ಅತೀ ಕಡಿಮೆ ಭಯ, ಅಪಾರ ಪ್ರೀತಿ, ಅಭಿಮಾನ… ಇದು ಗುರುವಾರ ಜಿನೈಕ್ಯರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರನ್ನು ಜಾತಿ, ಮತ ಭೇದವಿಲ್ಲದೆ ಎಲ್ಲರೂ ಪ್ರೀತಿಸಲು ಕಾರಣ.
ಗೆಳೆಯನ ಶಿಷ್ಯನಾದೆ: ಶ್ರೀ ಭುಜಬಲಿ ಬ್ರಹ್ಮಚರ್ಯ ಆಶ್ರಮದಲ್ಲಿ ಓದುತ್ತಿರುವಾಗ ಆತ್ಮೀಯ ಗೆಳೆಯರಾಗಿದ್ದೆವು. ಅದೇ ಗೆಳೆತನ ಕೊನೆಗೆ ನನ್ನನ್ನು ಅವರ ಶಿಷ್ಯನನ್ನಾಗಿಸಿತು. ಕಾರ್ಕಳಕ್ಕೆ ಬಂದಾಗ ಅವರ ಪ್ರಾಥಮಿಕ ಶಾಲಾ ಗುರುಗಳಾದ ಜಿ. ಜಗತ್ಪಾಲ ಶೆಟ್ಟಿ ಅವರನ್ನು ಗೌರವಿಸಿ ಅಭಿನಂದಿಸಿದ್ದರು ಎಂದು ಕಾರ್ಕಳದ ಎಂ. ಶಿಶುಪಾಲ ಜೈನ್ ನೆನಪಿಸಿಕೊಂಡರು. ಚಿಕ್ಕವರಿದ್ದಾಗಲೇ ಸರಳ, ಸಜ್ಜನಿಕೆ ಅವರಲ್ಲಿತ್ತು. ಧರ್ಮದ ಬಗ್ಗೆ ಅಪಾರ ಗೌರವ, ಮೋಹ ಹೊಂದಿದ್ದರು. ಅವರ ಬಾಲ್ಯದ ಗುರಿಯು ಮುಂದೆ ಅವರನ್ನು ಓರ್ವ ಶ್ರೇಷ್ಠ ವ್ಯಕ್ತಿಯನ್ನಾಗಿಸಿತು ಎಂದು ಇನ್ನೋರ್ವ ಸಹಪಾಠಿ ಎಸ್. ಸಾಂತಪ್ಪ ಜೈನ್ ಮೈಸೂರು ಸ್ಮರಿಸಿದರು.