ಯಲ್ಲಾಪುರ: ಅಡಿಕೆ ಕೊಯ್ಯುವ ವಿಚಾರದಲ್ಲಿ ಉಂಟಾದ ಕಲಹ; ಹಲ್ಲೆ, ಆತ್ಮಹತ್ಯೆಗೆ ಯತ್ನ

ಯಲ್ಲಾಪುರ: ಅಡಕೆ ಕೊಯ್ಯುವ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬವೊಂದರಲ್ಲಿ ನಡೆದ ಜಗಳ ಬಳಿಕ ಹಲ್ಲೆ ಆ ನಂತರ ಆತ್ಮಹತ್ಯೆ ಯತ್ನದವರೆಗೆ ಅತಿರೇಕಕ್ಕೇರಿದ ಘಟನೆ ತಾಲೂಕಿನ ಉಚಗೇರಿ ಭಾಗದ ಬಿಬ್ಬನಳ್ಳಿ ಬಳಿ ನಡೆದಿದೆ.
ಕಸಗೆಜಡ್ಡಿಯ ನಾರಾಯಣ ಹುಲಿಯಾ ಸಿದ್ದಿ ಎಂಬವರ ಪುತ್ರ ಮಹಾಬಲೇಶ್ವರ ಸಿದ್ದಿ ಎಂಬವರು ಬಿಬ್ಬನಳ್ಳಿಯಲ್ಲಿರುವ ತಮ್ಮ ಕುಟುಂಬಕ್ಕೆ ಸೇರಿದ ಅಡಕೆ ತೋಟದಲ್ಲಿ ಅರ್ಧ ಭಾಗದ ಅಡಕೆ ಕೊಯ್ಲು ಮಾರಲು ತಂದೆಯಲ್ಲಿ ಅನುಮತಿ ಪಡೆದು, ಕೊಯ್ಲು ಮಾರುತ್ತಿದ್ದರು.
ಈ ವೇಳೆ ಸ್ಥಳಕ್ಕೆ ಬಂದ ಇವರದೇ ಕುಟುಂಬದವರಾದ ನಾರಾಯಣ ಸಿದ್ದಿ, ಈಶ್ವರ ನಾರಾಯಣ ಸಿದ್ದಿ, ಶಂಕರ ನಾರಾಯಣ ಸಿದ್ದಿ, ಸುರೇಶ ನಾರಾಯಣ ಸಿದ್ದಿ ಹಾಗೂ ಲೋಹಿತ್ ಈಶ್ವರ ಸಿದ್ದಿ ಎಂಬವರು ಕೊನೆ ಕೊಯ್ಲು ಮಾಡುತ್ತಿದ್ದ ಮಹಾಬಲೇಶ್ವರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ತಡೆಯಲು ಬಂದ ಅವರ ಪತ್ನಿಗೆ ಜೀವ ಬೆದರಿಕೆ ಹಾಕಿದ್ದಾರೆ.
ಇದರಿಂದ ನೊಂದ ಮಹಾಬಲೇಶ್ವರ ಕೊಯ್ಲು ಅರ್ಧಕ್ಕೆ ಬಿಟ್ಟು ತಮ್ಮ ಉಚಗೇರಿಯ ಮನೆಗೆ ಹೋಗಿದ್ದಾರೆ. ಅಲ್ಲಿಗೂ ಬಂದ ನಾರಾಯಣ ಸಿದ್ದಿ ತಂಡದವರು ಮಹಾಬಲೇಶ್ವರ ಸಿದ್ದಿ ಅವರ ಪತ್ನಿ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾರೆ. ಇದರಿಂದ ನೊಂದು ಆಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಕುರಿತು ಮಹಾಬಲೇಶ್ವರ ಸಿದ್ದಿ ದೂರು ನೀಡಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.