ರೇಪ್​ ಆರೋಪ ಮಾಡಿದವಳನ್ನೇ ಮದ್ವೆಯಾಗಿ ಆಸೆಯಾಗಿದೆ ಎಂದು ಗುಹೆಯೊಳಗೆ ಕರೆದೊಯ್ದು ವಿಕೃತಿ!

ನವದೆಹಲಿ: ಅತ್ಯಾಚಾರ ಆರೋಪದ ಬಳಿಕ ಸಂತ್ರಸ್ತೆಯನ್ನು ಮದುವೆ ಆಗಿದ್ದ ಆರೋಪಿ ಇದೀಗ ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಆರೋಪಿಯು ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆಯನ್ನು ಸಹ ಎದುರಿಸಿದ್ದ.

ಆರೋಪಿಯನ್ನು ರಾಜೇಶ್​ ಎಂದು ಗುರುತಿಸಲಾಗಿದೆ. ದೆಹಲಿ ಮೂಲದ ರಾಜೇಶ್, ಅತ್ಯಾಚಾರ ಆರೋಪದ ಮೇಲೆ ಜೈಲಿಗೆ ಹೋಗಿದ್ದ. ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾದ ಬಳಿಕ ಡಿಸೆಂಬರ್​ನಲ್ಲಿ ಸಂತ್ರಸ್ತೆಯನ್ನು ಮದುವೆ ಆಗಿದ್ದ. ಇದಾದ ಆರೇ ತಿಂಗಳಲ್ಲಿ ಪತ್ನಿಯನ್ನು ಹತ್ಯೆ ಮಾಡಿ ಮತ್ತೊಮ್ಮೆ ಜೈಲು ಸೇರಿದ್ದಾನೆ.

ವಿವರಣೆಗೆ ಬರುವುದಾರೆ, ಕಳೆದ ವರ್ಷ ಜೂನ್​ನಲ್ಲಿ ಸಂತ್ರಸ್ತೆ ರಾಜೇಶ್ ವಿರುದ್ಧ ದೂರು ನೀಡಿದ್ದಳು. ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಿದ್ದಳು. ಆಕೆ ನೀಡಿದ ದೂರಿನ ಆಧಾರದ ಮೇಲೆ ರಾಜೇಶ್​ನನ್ನು ಕಳೆದ ವರ್ಷ ಆಗಸ್ಟ್​ನಲ್ಲಿ ಬಂಧಿಸಲಾಗಿತ್ತು. ಮದವೆ ಆಗುವುದಾಗಿ ಹೇಳಿ ಸಂತ್ರಸ್ತೆ ದೂರನ್ನು ಹಿಂಪಡೆದಿದ್ದಳು. ಬಳಿಕ ಅಕ್ಟೋಬರ್​ನಲ್ಲಿ ತಿಹಾರ್​ ಜೈಲಿನಿಂದ ರಾಜೇಶ್​ ಬಿಡುಗಡೆಯಾಗಿದ್ದ. ಇಬ್ಬರು ಡಿಸೆಂಬರ್​ನಲ್ಲಿ ಮದುವೆ ಆಗಿದ್ದರು.

ಮದುವೆಯಾದ ಕೆಲವೇ ದಿನಗಳಲ್ಲಿ ರಾಜೇಶ್​, ಸಂತ್ರಸ್ತೆಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆಕೆಯ ಪಾಲಕರು ಆರೋಪಿಸಿದ್ದಾರೆ. ಮತ್ತು ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತಂತೆ. ಸಂತ್ರಸ್ತೆ ಒಮ್ಮೆ ಜಗಳ ಆಡಿಕೊಂಡು ತವರಿಗೂ ಬಂದುಬಿಟ್ಟಿದ್ದಳು. ಆದರೆ, ರಾಜೇಶ್​ ಆಕೆಯ ಮನವೊಲಿಸಿ ವಾಪಸ್​ ಕರೆದೊಯ್ದಿದ್ದನು.

ಇದರ ನಡುವೆ ಜೂನ್​ 11ರಂದು ತಾಯಿಯನ್ನು ನೋಡಿಕೊಂಡು ಬರುವುದಾಗಿ ಹೇಳಿ ಸಂತ್ರಸ್ತೆಯನ್ನು ಉತ್ತರಾಖಂಡದ ಉದಾಮ್​ ಸಿಂಗ್​ ನಗರಕ್ಕೆ ರಾಜೇಶ್​ ಕರೆದೊಯ್ದಿದ್ದ. ಅಂದಿನಿಂದ ಆತನ ಫೋನ್​ ಸ್ವಿಚ್​ ಆಫ್​ ಆಗಿತ್ತು. ಇದಾದ ಬಳಿಕ ಸಂತ್ರಸ್ತೆಯ ಪಾಲಕರು ಜೂನ್​ 15ರಂದು ದೆಹಲಿ ದ್ವಾರಕ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊನೆಯದಾಗಿ ಸಂತ್ರಸ್ತೆಯ ಫೋನ್ ಸ್ವಿಚ್​ ಆಫ್​ ಆದ​ ಸ್ಥಳದ ಜಾಡು ಹಿಡಿದು ಹೋಗಿದ್ದಾರೆ. ಆರೋಪಿ ರಾಜೇಶ್​ ಫೋನ್​ ಕೂಡ ಅದೇ ಸ್ಥಳದಲ್ಲಿ ಸ್ವಿಚ್​ ಆಫ್​ ಆಗಿದೆ. ಇಬ್ಬರ ಫೋನ್​​ ನೈನಿತಾಲ್​ನ ಹನುಮನ್​ಗಢ ದೇವಸ್ಥಾನದಲ್ಲಿ ಜೂನ್​ 12ರಂದು ಸ್ವಿಚ್​ ಆಫ್​ ಆಗಿದೆ.

ಬಳಿಕ ರಾಜೇಶ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರಂಭದಲ್ಲಿ ತನ್ನದು ತಪ್ಪಿಲ್ಲ ಎಂದು ಹೇಳಿದ್ದಾನೆ. ಬಳಿಕ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿ ಬಾಯ್ಬಿಟ್ಟಿದ್ದಾನೆ. ನೈನಿತಾಲ್​ನಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ನಿರ್ಜನ ಪ್ರದೇಶದಲ್ಲಿ ದೈಹಿಕ ಸಂಪರ್ಕ ಬೆಳೆಸುವ ಆಸೆಯನ್ನು ವ್ಯಕ್ತಪಡಿಸಿದೆ. ಬಳಿಕ ಹತ್ತಿರದ ಗುಹೆಯೊಂದರ ಬಳಿ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿ, ಕತ್ತು ಹಿಸುಕಿ ಕೊಲೆ ಮಾಡಿದೆ ಎಂದು ಆರೋಪಿ ಕೊನೆಗೆ ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್​ 302 ಮತ್ತು 201 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.