ಗಡಿ ಹಿಂಸಾಚಾರ: ಅಸ್ಸಾಂ ಸಿಎಂ, ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಮಿಜೋರಾಂ ಪೊಲೀಸರು

ಗಡಿ ಹಿಂಸಾಚಾರ: ಅಸ್ಸಾಂ ಸಿಎಂ, ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಮಿಜೋರಾಂ ಪೊಲೀಸರು

ಗುವಾಹಟಿ, ಜು.31: ಈಶಾನ್ಯ ರಾಜ್ಯವಾದ ಅಸ್ಸಾಂ ಮತ್ತು ಮಿಜೋರಾಂನ ಗಡಿಯಲ್ಲಿ ಎರಡೂ ರಾಜ್ಯಗಳ ಪೊಲೀಸರ ನಡುವೆ ರಕ್ತಸಿಕ್ತ ಘರ್ಷಣೆ ನಡೆದಿತ್ತು. ಈ ಉಭಯ ರಾಷ್ಟ್ರಗಳ ನಡುವಿನ ಗುಂಡಿನ ಚಕಮಕಿಯಲ್ಲಿ 6 ಅಸ್ಸಾಂ ಪೊಲೀಸರು ಸಾವನ್ನಪ್ಪಿದ್ದರು. ಈಗ ಈ ಪ್ರಕರಣಕ್ಕೆ ಸಂಬಂಧಿಸಿ ಮಿಜೋರಾಂ ಪ್ರಕರಣ ದಾಖಲು ಮಾಡಿದೆ. ಈ ಪ್ರಕರಣದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ನೆರೆಯ ರಾಜ್ಯದ ಇತರ ಉನ್ನತ ಅಧಿಕಾರಿಗಳನ್ನು ಹೆಸರಿಸಿದೆ ಎಂದು ವರದಿ ತಿಳಿಸಿದೆ.

ಅಸ್ಸಾಂನ ಕ್ಯಾಚಾರ್ ನ ಗಡಿಭಾಗದಲ್ಲಿರುವ ಮಿಜೋರಾಂನ ಕೊಲಾಸಿಬ್ ಜಿಲ್ಲೆಯ ವೈರೆಂಗ್ಟೆ ಪೊಲೀಸ್ ಠಾಣೆಯಲ್ಲಿ "ಕೊಲೆ ಯತ್ನ" ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್ ಗಳ ಅಡಿಯಲ್ಲಿ ಎಫ್‌ಐಆರ್‌ ಸಲ್ಲಿಸಲಾಗಿದೆ. ಅಸ್ಸಾಂ ಪೊಲೀಸ್ ಸಿಬ್ಬಂದಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಘಟನೆಯ ದಿನ ಮಿಜೋರಾಂ ಪೊಲೀಸರೊಂದಿಗೆ "ಸೌಹಾರ್ದಯುತ ಸಂವಾದ" ನಡೆಸಲು ನಿರಾಕರಿಸಿದರು ಎಂದು ವರದಿ ತಿಳಿಸಿದೆ.

"ಅಸ್ಸಾಂ ಪೊಲೀಸರು ಬಲವಂತವಾಗಿ ಎಸ್‌ಪಿ, ಕೋಲಾಸಿಬ್‌ಗೆ ಈ ಪ್ರದೇಶವು ಅಸ್ಸಾಂ ಪ್ರದೇಶದ ವ್ಯಾಪ್ತಿಗೆ ಬರುತ್ತದೆ ಮತ್ತು ಅಸ್ಸಾಂನ ಮುಖ್ಯಮಂತ್ರಿಯ ಸೂಚನೆಯಂತೆ ಶಿಬಿರವನ್ನು ನಿರ್ಮಿಸಲು ಉದ್ದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ," ಎಂದು ಎಫ್‌ಐಆರ್ ಹೇಳಿದೆ.

ಗುಡಾರಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ಅಸ್ಸಾಂ ಪೊಲೀಸರು ಶಿಬಿರ ನಿರ್ಮಾಣಕ್ಕಾಗಿ ಸ್ಥಳಕ್ಕೆ ಬಂದಿದ್ದರು. ಇದು ಮಿಜೋರಾಂ ಬಿಒಪಿಯನ್ನು ಬಲವಂತವಾಗಿ ಆಕ್ರಮಿಸಿಕೊಳ್ಳುವ ಉದ್ದೇಶವನ್ನು ಸ್ಪಷ್ಟವಾಗಿ ತೋರಿಸಿದೆ. ಏಕೆಂದರೆ ಅಸ್ಸಾಂ ಪೊಲೀಸರೊಂದಿಗೆ ವಾಹನಗಳ ಬೆಂಗಾವಲು ಆಂಬುಲೆನ್ಸ್ ಮತ್ತು ಸುಮಾರು 20 ವಾಹನಗಳು ಇದ್ದವು," ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಪೊಲೀಸರಲ್ಲಿ ಅಸ್ಸಾಂ ಇನ್ಸ್‌ಪೆಕ್ಟರ್ ಜನರಲ್, ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್, ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದ್ದಾರೆ. ಕ್ಯಾಚಾರ್ ಜಿಲ್ಲಾ ಉಪ ಆಯುಕ್ತರನ್ನು ಸಹ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ. ಜೊತೆಗೆ 200 ಅನಾಮದೇಯ ಪೊಲೀಸ್ ಸಿಬ್ಬಂದಿಗಳನ್ನು ಸೇರಿಸಲಾಗಿದೆ. ಹಾಗೆಯೇ ಆಗಸ್ಟ್ 1 ರಂದು ವೈರೆಂಗ್ಟೆ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಎರಡು ರಾಜ್ಯ ಪೊಲೀಸ್ ಪಡೆಗಳ ನಡುವಿನ ಸೋಮವಾರದ ಘರ್ಷಣೆಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಮಿಜೋರಾಂ ಅಧಿಕಾರಿಗಳಿಗೆ ಮತ್ತು ಇನ್ನೊಬ್ಬರು ರಾಜ್ಯಸಭೆಯ ಮಿಜೋರಾಂನ ಕೆ ವನ್ಲಾಲ್ವೇನಾಗೆ ಸಮನ್ಸ್ ನೀಡಿದ ದಿನವೇ ಅಸ್ಸಾಂನ ಆರು ಹಿರಿಯ ಅಧಿಕಾರಿಗಳಿಗೆ ಹಾಜರಾಗುವಂತೆ ಮಿಜೋರಾಂ ಪೊಲೀಸರು ನೋಟಿಸ್ ನೀಡಿದರು.

ಎರಡು ರಾಜ್ಯಗಳು ದಶಕಗಳಿಂದ ಗಡಿ ವಿಚಾರದಲ್ಲಿ ಭಿನ್ನಾಭಿಪ್ರಾಯದಲ್ಲಿದ್ದವು. ಆದರೆ ಈ ವಾರ ವಿಷಯಗಳು ಭುಗಿಲೆದ್ದವು. ಸೋಮವಾರ, ಈ ಎರಡು ಜಿಲ್ಲೆಗಳ ನಡುವಿನ ಗಡಿ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಉಭಯ ರಾಷ್ಟ್ರಗಳೆರಡು ಹಿಂಸಾಚಾರಕ್ಕೆ ಕಾರಣ ಯಾರು ಎಂಬ ವಿಚಾರದಲ್ಲಿ ಪರಸ್ಪರ ಬೊಟ್ಟು ಮಾಡಿದ್ದಾರೆ.

ಗಡಿ ವಿವಾದ ಪ್ರಾರಂಭವಾದದ್ದು ಹೇಗೆ?

ಅಸ್ಸಾಂ ಮತ್ತು ಮಿಜೋರಾಂ ಗಡಿ ಸುಮಾರು 164 ಕಿ.ಮೀ. ವ್ಯಾಪ್ತಿಯಲ್ಲಿದೆ. ಈ ಗಡಿ ಐಜಾಲ್, ಕೋಲಾಸಿಬ್, ಮಿಜೋರಾಂನ ಮಾಮಿತ್ ಮತ್ತು ಅಸ್ಸಾಂನ ಕಚಾರ್, ಹೈಲೆ ಕಂಡಿ ಮತ್ತು ಕರಿಮ್‌ಗಂಜ್ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಈ ಗಡಿಯ ಸಮೀಪವಿರುವ ಗುಟ್‌ಗುಟಿ ಗ್ರಾಮದ ಬಳಿ ಮಿಜೋರಾಂ ಪೊಲೀಸರು ಕೆಲವು ತಾತ್ಕಾಲಿಕ ಶಿಬಿರಗಳನ್ನು ಸ್ಥಾಪಿಸಿದಾಗ ವಿವಾದ ಪ್ರಾರಂಭವಾಗಿದೆ. ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮನವಿ ಮಾಡಿದ ನಂತರ, ಈಗ ಈ ಪ್ರದೇಶದಲ್ಲಿ ವಾತಾವರಣ ಬಿಗುವಾಗಿದೆ.

ಕೇಂದ್ರೀಯ ಮೀಸಲು ಪೊಲೀಸ್ ಪಡೆ ಈ ಪ್ರದೇಶಗಳಲ್ಲಿ ತನ್ನ ಸಿಬ್ಬಂದಿಗಳ ನಿಯೋಜನೆಯನ್ನು ಹೆಚ್ಚಿಸಿದೆ. ಅಸ್ಸಾಂ ಮತ್ತು ಮಿಜೋರಾಂನ ಪೊಲೀಸ್ ಪಡೆಗಳ ನಡುವೆ ಐದು ಕಂಪನಿಗಳು (ಒಟ್ಟು 500 ಪಡೆಗಳು) ನಿಂತಿವೆ. ಇನ್ನೂ ಎರಡು ಕಂಪನಿಗಳು ಸನ್ನದ್ಧ ಸ್ಥಿತಿಯಲ್ಲಿವೆ. ಅಸ್ಸಾಂ ವಿಧಾನಸಭೆಯ ಸರ್ವಪಕ್ಷ ನಿಯೋಗವು ಗಡಿ ಪ್ರದೇಶಗಳಿಗೆ ಮತ್ತು ಸೋಮವಾರ ಹಿಂಸಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಲು ಸಿದ್ಧತೆ ನಡೆಸಿದೆ.