ಗೋವಾ ಚುನಾವಣೆ; ಮಾಜಿ ಸಚಿವ ಮಿಚೆಲ್ ಲೋಬೊ ಕಾಂಗ್ರೆಸ್ ಸೇರ್ಪಡೆ
ಪಣಜಿ, ಜನವರಿ 12; ಗೋವಾದ ಮಾಜಿ ಸಚಿವ ಮಿಚೆಲ್ ಲೋಬೊ ಕಾಂಗ್ರೆಸ್ ಸೇರಿದ್ದಾರೆ. ಸೋಮವಾರ ಅವರು ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ಬಿಜೆಪಿ ತೊರೆದಿದ್ದರು.
ಗೋವಾ ಚುನಾವಣೆ ಎಐಸಿಸಿ ಉಸ್ತುವಾರಿ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮಿಚೆಲ್ ಲೋಬೊ ಪತ್ನಿ ಜೊತೆ ಕಾಂಗ್ರೆಸ್ ಸೇರಿದರು.
ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು, "ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪರಂಪರೆಯನ್ನು ಬಿಜೆಪಿ ಮರೆತು ಹೋಗಿದೆ" ಎಂದು ಟೀಕಿಸಿದರು.
ಮಿಚೆಲ್ ಲೋಬೊ ಚುನಾವಣೆಯಲ್ಲಿ ಪತ್ನಿಗೆ ಸಹ ಟಿಕೆಟ್ ಕೇಳಿದ್ದರು ಎಂಬ ಆರೋಪವಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, "ನಾನು ಯಾರಿಗೂ ಸಹ ಟಿಕೆಟ್ ಕೇಳಿರಲಿಲ್ಲ" ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ದಕಲಂಘಾಟ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಮಿಚೆಲ್ ಲೋಬೊ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟದಲ್ಲಿ ವಿಜ್ಞಾನ & ತಂತ್ರಜ್ಞಾನ, ಬಂದರು ಖಾತೆ ಸಚಿವರಾಗಿದ್ದರು. ಸೋಮವಾರ ಸಚಿವ ಸ್ಥಾನ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಕೆ ಮಾಡಿದ್ದರು.
ರಾಜೀನಾಮೆ ಬಳಿಕ ಮಾತನಾಡಿದ ಮೈಕಲ್ ಲೋಬೊ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಬಿಜೆಪಿ ಈಗ ಜನಸಾಮಾನ್ಯರ ಪಕ್ಷವಾಗಿ ಉಳಿದಿಲ್ಲ. ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ" ಎಂದು ಆರೋಪಿಸಿದ್ದರು.