ಫಿಟ್‌ನೆಸ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಮ್ಯಾಕ್ಸ್‌ವೆಲ್: ಆರ್‌ಸಿಬಿಗೆ ಶುರುವಾಯ್ತು ತಲೆನೋವು

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆರಂಭಕ್ಕೆ ಇನ್ನೂ ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ಎಲ್ಲಾ ಫ್ರಾಂಚೈಸಿಗಳ ಆಟಗಾರರು ಈಗಾಗಲೇ ತಂಡವನ್ನು ಸೇರಿಕೊಂಡಿದ್ದು, ಅಭ್ಯಾಸ ಮಾಡುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಚಿನ್ನಸ್ವಾಮಿ ಅಂಗಳದಲ್ಲಿ ಅಭ್ಯಾಸ ಆರಂಭಿಸಿದೆ.
ತಂಡದ ಪ್ರಮುಖ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯಗೊಂಡ ಬಳಿಕ ಈ ಬಾರಿ ಐಪಿಎಲ್‌ನಲ್ಲಿ ಆಡುವುದು ಅನುಮಾನ ಎನ್ನಲಾಗಿತ್ತು, ಆದರೂ ಅವರು ಭಾರತದ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದರು, ಸರಣಿಯ ಮೊದಲನೇ ಏಕದಿನ ಪಂದ್ಯದಲ್ಲಿ ಆಡಿದ್ದ ಮ್ಯಾಕ್ಸ್‌ವೆಲ್ ನಂತರ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಅವರು ಸಂಪೂರ್ಣವಾಗಿ ಫಿಟ್ ಆಗಿಲ್ಲ ಎನ್ನುವ ಕಾರಣ ನೀಡಲಾಗಿತ್ತು.
ಸದ್ಯ ಆರ್ ಸಿಬಿ ಕ್ಯಾಂಪ್ ಸೇರಿಕೊಂಡಿರುವ ಮ್ಯಾಕ್ಸ್‌ವೆಲ್ ಅಭ್ಯಾಸ ಮಾಡುತ್ತಿದ್ದಾರೆ. ತಾವಿನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ ವಿಚಾರವನ್ನು ಸ್ವತಃ ಗ್ಲೆನ್ ಮ್ಯಾಕ್ಸ್‌ವೆಲ್ ಒಪ್ಪಿಕೊಂಡಿದ್ದಾರೆ. ತಾವಿನ್ನೂ ಸಂಪೂರ್ಣವಾಗಿ ಫಿಟ್ ಆಗಲು ಹಲವು ತಿಂಗಳ ಸಮಯ ಬೇಕಾಗುತ್ತದೆ ಎನ್ನುವ ಮೂಲಕ ತಂಡದ ಆತಂಕವನ್ನು ಹೆಚ್ಚಿಸಿದ್ದಾರೆ.
2022ರ ಟಿ20 ವಿಶ್ವಕಪ್ ಬಳಿಕ ಮ್ಯಾಕ್ಸ್‌ವೆಲ್ ಸಮಾರಂಭವೊಂದರಲ್ಲಿ ಬಿದ್ದು ಎಡಗಾಲಿಗೆ ಗಾಯಮಾಡಿಕೊಂಡಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು, ನಂತರ ಹಲವು ತಿಂಗಳ ಕಾಲ ವಿಶ್ರಾಂತಿ ಪಡೆದರು. ಸದ್ಯ ಗಾಯ ವಾಸಿಯಾಗಿದ್ದರೂ, ಸಂಪೂರ್ಣವಾಗಿ ಫಿಟ್‌ನೆಸ್ ಪಡೆಯಲು ಇನ್ನೂ ಕೆಲವು ತಿಂಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಫಿಟ್‌ನೆಸ್ ಹೆಚ್ಚಿಸಿಕೊಳ್ಳಲು ಐಪಿಎಲ್ ಸಹಕಾರಿ
ಮಾರ್ಚ್ 31 ರಂದು ಪ್ರಾರಂಭವಾಗಲಿರುವ ಐಪಿಎಲ್ ಸೀಸನ್‌ಗೆ ಮುಂಚಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಮಾತನಾಡಿರುವ ಮ್ಯಾಕ್ಸ್‌ವೆಲ್, "ಕಾಲು ಸರಿಯಾಗಿದೆ. ಆದರೆ ಮೊದಲಿನಂತೆ ಸಂಪೂರ್ಣವಾಗಿ ಫಿಟ್ ಆಗಲು ಇನ್ನೂ ಕೆಲವು ತಿಂಗಳ ಸಮಯ ಬೇಕಾಗುತ್ತದೆ" ಎಂದು ಮಾಹಿತಿ ನೀಡಿದ್ದಾರೆ.
ಗಾಯದಿಂದ ಚೇತರಿಸಿಕೊಂಡ ನಂತರ ಆರ್ ಸಿಬಿ ತಂಡಕ್ಕಾಗಿ ಆಡುವ ಭರವಸೆ ಇದೆ ಎಂದು ಅವರು ಹೇಳಿದರು. ನನ್ನ ಫಿಟ್‌ನೆಸ್ ಪಡೆದುಕೊಳ್ಳಲು ಮತ್ತು ಅದರ ಮೇಲೆ ಹೆಚ್ಚಿನ ಕೆಲಸ ಮಾಡಲು ಇದು ಉತ್ತಮ ಅವಕಾಶವಾಗಿದೆ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಕಾಲ ಬಯೋ-ಬಬಲ್ಸ್‌ನಲ್ಲಿ ಐಪಿಎಲ್ ಪಂದ್ಯಾವಳಿ ನಡೆದಿತ್ತು. ಈ ಆವೃತ್ತಿಯಲ್ಲಿ ಐಪಿಎಲ್ ಸಾಂಪ್ರದಾಯಿಕ ಸ್ವರೂಪಕ್ಕೆ ಮರಳುತ್ತಿದೆ. ತವರು ಮತ್ತು ಹೊರಗಿನ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ತವರಿನಲ್ಲಿ ಅಭಿಮಾನಿಗಳ ಮುಂದೆ ಆಡಲು ಉತ್ಸಾಹಗೊಂಡಿದ್ದೇನೆ ಎಂದು ಅವರು ಹೇಳಿದರು.
ಆರ್ ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ
ಐಪಿಎಲ್ ಪಂದ್ಯಾವಳಿ ಆರಂಭಕ್ಕೆ ಮುನ್ನ ಆರ್ ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ಏರ್ಪಡಿಸಿದೆ. ಮಾರ್ಚ್ 26ರಂದು ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ತಂಡದ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರನ್ನು ಗೌರವಿಸಲಿದೆ.
ಅಭಿಮಾನಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ನಾಯಕ ಫಾಫ್ ಡುಪ್ಲೆಸಿಸ್ ಸೇರಿದಂತೆ ಆರ್ ಸಿಬಿ ಆಟಗಾರರು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಆರ್ ಸಿಬಿ 2023ರ ಐಪಿಎಲ್‌ನಲ್ಲಿ ತನ್ನ ಮೊದಲನೇ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಚಿನ್ನಸ್ವಾಮಿ ಅಂಗಳದಲ್ಲಿ ಏಪ್ರಿಲ್ 2ರಂದು ಈ ಪಂದ್ಯ ನಡೆಯಲಿದೆ.