ಸದ್ಯದಲ್ಲೇ ಹೊಸ ಯುವ ನೀತಿ ಜಾರಿ : ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ಸರ್ಕಾರ ಹೊಸ ಯುವ ನೀತಿಯನ್ನು ತರಲು ಉದ್ದೇಶಿಸಿದ್ದು, ಮುಂಬರುವ ವರ್ಷಗಳಲ್ಲಿ ಈ ನೀತಿ ಯುವಕರಿಗೆ ಮಾದರಿ ರೀತಿಯಲ್ಲಿ ಮಾರ್ಗದರ್ಶನ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸ್ವಾಮಿ ವಿವೇಕಾನಂದರ 159 ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವರ್ಚುಯಲ್ ಆಗಿ ಭಾಗವಹಿಸಿ ಮಾತನಾಡಿದರು.
ಯುವಕರಿಗಾಗಿ ತತ್ವಾಧಾರಿತವಾದಂತಹ ವೈಚಾರಿಕೆ ನೆಲೆಯಲ್ಲಿ ಹೆಚ್ಚಿನ ಬೆಂಬಲ, ಪ್ರೋತ್ಸಾಹ ನೀಡಲು ಸರ್ಕಾರ ಸಿದ್ಧವಿದೆ. ಈ ದಿಸೆಯಲ್ಲಿ ವಿಶೇಷ ಯೋಜನೆಯೊಂದನ್ನು ಮುಂದಿನ ಆಯವ್ಯಯದಲ್ಲಿ ತರಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ನಮ್ಮ ಜೀವನದಲ್ಲಿ ಸ್ವಾಮಿ ವಿವೇಕಾನಂದರು ಸದಾ ಪ್ರಸ್ತುತವಾಗಿರುತ್ತಾರೆ. ಸಾರ್ಥಕತೆಯ ಹಾಗೂ ಸಾಧನೆಯ ಬದುಕನ್ನು ನಡೆಸಿ ಹಾಗೂ ಸಾವಿನ ನಂತರವೂ ಬದುಕುವ ರೀತಿಯನ್ನು ತಿಳಿಸಿದ್ದಾರೆ ಎಂದರು.
ಸ್ವಾಮಿ ವಿವೇಕಾನಂದರ ಲೈಫ್ ಆಫ್ಟರ್ ಡೆತ್ ಎಂಬ ಪುಸ್ತಕವನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ವಿವೇಕಾನಂದರ ಸಾವಿನ ನಂತರದ ಬದುಕು ಎನ್ನುವ ಕಲ್ಪನೆ ಅದ್ಬುತವಾದದ್ದು. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವುದು ಸಾಧನೆ ಎಂಬುದನ್ನು ಪ್ರತಿಪಾದಿಸಿದ್ದರು. ಚೈತನ್ಯಮಯ ಬದುಕಿನ ದಾರಿಯನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಸ್ವಾಮಿ ವಿವೇಕಾನಂದರ ಬದುಕಿನ ರೀತಿ ನೀತಿಗಳನ್ನು ಯುವಜನತೆಗೆ ಮನದಟ್ಟು ಮಾಡುವ ಕೆಲಸ ಮಾಡಬೇಕಿದೆ. ಸರ್ಕಾರ ಹಾಗೂ ಸಮಾಜ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ರಾಮಕೃಷ್ಣ ಪರಮಹಂಸ, ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಸಮಾಜಕ್ಕೆ ಪ್ರಚುರ ಪಡಿಸುವ ಕೆಲಸವನ್ನು ರಾಮಕೃಷ್ಣ ಮಿಷನ್ ಸಂಸ್ಥೆ ಪರಿಣಾಮಕಾರಿಯಾಗಿ ಮಾಡುತ್ತಿದೆ ಎಂದರು.
ಸ್ವಾಮಿ ವಿವೇಕಾನಂದರು ಯುಗಪುರುಷರು. ಯುಗದಲ್ಲಿ ಒಬ್ಬರು ಅತ್ಯಂತ ತೇಜ್ವಸಿಯಾಗಿ ವಿಭಿನ್ನವಾಗಿ ಹುಟ್ಟುತ್ತಾರೆ. ಅವರ ಅರ್ಥಪೂರ್ಣವಾಗಿ ಪುನರ್ ನಾಮಕರಣವನ್ನು ರಾಮಕೃಷ್ಣ ಪರಮಹಂಸರು ಮಾಡಿದ್ದಾರೆ. ಎಲ್ಲಿ ವಿವೇಕ ಇದೆಯೋ ಅಲ್ಲಿ ಆನಂದ ಇದೆ ಎಂದು. ವಿವೇಕ ಎನ್ನುವುದು ಪ್ರತಿ ಮನುಷ್ಯನ ಅಂತರ್ಗತವಾದ ಗುಣಧರ್ಮ. ವಿವೇಕ ಎನ್ನುವುದು ಪ್ರಾಣಿಗಳಿಂದ ಮನುಷ್ಯನನ್ನು ಪ್ರತ್ಯೇಕ ಮಾಡುವುದು. ಈ ವಿವೇಕವನ್ನು ನಾವು ಯಾವ ರೀತಿ, ಯಾವ ದಿಕ್ಕಿನಲ್ಲಿ ಯಾವುದಕ್ಕೆ ಬಳಕೆ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯ. ಸ್ವಾಮಿ ವಿವೇಕಾನಂದರು ನಮಗೆ ದಾರಿ ತೋರಿದ್ದಾರೆ. ವಿವೇಕವನ್ನು ಯಾವ ರೀತಿ, ಯಾವುದಕ್ಕೆ ಬಳಸಬೇಕು. ಬದುಕನ್ನು ತನಗಾಗಿ ಬದುಕುವುದು ಸಹಜ. ಪರರಿಗಾಗಿ ಬದುಕುವುದು ಧರ್ಮ ಎಂದು ಸ್ವಾಮಿ ವಿವೇಕಾನಂದರು ತೋರಿಸಿಕೊಟ್ಟಿದ್ದಾರೆ ಎಂದರು.