ಅಮಿತ್ ಶಾ ಕಾರ್ಯಕ್ರಮದಿಂದ ದೂರ ಉಳಿದ BSY; ಅಚ್ಚರಿ ಮೂಡಿಸಿದ ಮಾಜಿ ಸಿಎಂ ನಡೆ

ಅಮಿತ್ ಶಾ ಕಾರ್ಯಕ್ರಮದಿಂದ ದೂರ ಉಳಿದ BSY; ಅಚ್ಚರಿ ಮೂಡಿಸಿದ ಮಾಜಿ ಸಿಎಂ ನಡೆ

ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದು, ಈಗಾಗಲೇ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಆಗಮಿಸಿದ್ದಾರೆ. ಆದರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಮಿತ್ ಶಾ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತಬೇಟೆಗಾಗಿ ರಾಜ್ಯ ಬಿಜೆಪಿ ಆಯೋಜಿಸಿರುವ ಅಮಿತ್ ಶಾ ಅವರ ಬೃಹತ್ ಸಮಾವೇಶ ಕಾರ್ಯಕ್ರಮಕ್ಕೆ ಹಿರಿಯ ನಾಯಕ, ಮಾಜಿ ಸಿಎಂ ಯಡಿಯೂರಪ್ಪ ಗೈರಾಗುತ್ತಿದ್ದಾರೆ. ಇಂದು ಮಂಡ್ಯ ಹಾಗೂ ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಿಂದ ಯಡಿಯೂರಪ್ಪ ದೂರ ಉಳಿಯಲಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಅನುಪಸ್ಥಿತಿಗೆ ಕಾರಣವೇನು ಎಂಬುದನ್ನು ಮಾಜಿ ಸಿಎಂ ಯಡಿಯೂರಪ್ಪ ಅಮಿತ್ ಶಾ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ ಎನ್ನಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಪೂರ್ವನಿಗದಿತ ಪ್ರವಾಸಗಳಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ. ಜನವರಿ 1ರವರೆಗೆ ವಿವಿಧ ಜಿಲ್ಲೆಗಳಲ್ಲಿ ಬಿ ಎಸ್ ವೈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬದಲು ಬೆಂಗಳೂರು ಹಾಗೂ ಮಂಡ್ಯ ಕಾರ್ಯಕ್ರಮದಲ್ಲಿ ಬಿ.ವೈ.ವಿಜಯೇಂದ್ರ ಅಮಿತ್ ಶಾ ಅವರ ಜೊತೆ ಇರಲಿದ್ದಾರೆ ಎನ್ನಲಾಗಿದೆ.