ಹಾಸನದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ! ಪ್ರಜ್ವಲ್ ರೇವಣ್ಣ ಮನೆ ಮುಂದೆ ಸೇರಿದ ಜೆಡಿಎಸ್ ಕಾರ್ಯಕರ್ತರು.
ಹಾಸನ: ಹಾಸನದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ಶುರುವಾಗಿದ್ದು ಸಂಸದ ಪ್ರಜ್ವಲ್ ರೇವಣ್ಣ ಮನೆ ಎದುರು ಅರಸೀಕೆರೆ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಜಮಾವಣೆ ಆಗಿದ್ದಾರೆ.
ನೂರಾರು ಸಂಖ್ಯೆಯಲ್ಲಿ ಜನರು ಸಂಸದ ಪ್ರಜ್ವಲ್ ರೇವಣ್ಣ ನಿವಾಸ ಬಳಿ ಜಮಾವಣೆ ಆಗಿದ್ದು ಅರಸೀಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರು ಅನ್ನೊದನ್ನ ಬೇಗ ಬಗೆ ಹರಿಸಿ ಎಂದು ಕಾರ್ಯಕರ್ತರು ಆಗ್ರಹ ಮಾಡುತ್ತಿದ್ದಾರೆ.
ಕಾರ್ಯಕರ್ತರು 'ಶಿವಲಿಂಗೇಗೌಡರು ನಮ್ಮನ್ನ ಕಡೆಗಣಿಸಿ ,ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಕಾರ್ಯಕ್ರಮಗಳಿಗೆ ಆಹ್ವಾನ ಮಾಡುತ್ತಿದ್ದಾರೆ. ನಮ್ಮ ಜೆಡಿಎಸ್ ಕಾರ್ಯಕರ್ತರ ಕೆಲಸವನ್ನೇ ಮಾಡಿ ಕೊಡುತ್ತಿಲ್ಲ. ಇತ್ತಿಚೆಗೆ ಜೆಡಿಎಸ್ ಅಡಿಯಲ್ಲಿ ಯಾವುದೇ ಕಾರ್ಯಕ್ರಮ ದಲ್ಲಿ ಅವರು ಭಾಗಿ ಕೂಡ ಆಗಿಲ್ಲ. ನಮ್ಮ ಕಣ್ಣ ಮುಂದೆಯೇ ಕಾಂಗ್ರೆಸ್ ಕಾರ್ಯಕರ್ತರಿಗೆ ಮಣೆ ಹಾಕುತ್ತಿದ್ದಾರೆ. ಆದಷ್ಟು ಬೇಗ ನಮ್ಮ ಕ್ಷೇತ್ರದ ಸಮಸ್ಯೆ ಬಗೆಹರಿಸಿ' ಎಂದು ಜೆಡಿಎಸ್ ಕಾರ್ಯಕರ್ತರು ಬೇಡಿಕೆ ಇರಿಸಿದ್ದಾರೆ.
ಮತ್ತೊಂದು ಆಲೋಚನೆಯನ್ನೂ ಹೊರ ಹಾಕಿರುವ ಜೆಡಿಎಸ್ ಕಾರ್ಯಕರ್ತರು 'ರೇವಣ್ಣ ಸಾಹೇಬರ ಕುಟುಂಬದವರೇ ಯಾರಾದರು ಅರಸೀಕೆರೆಗೆ ಬಂದು ಸ್ಪರ್ಧಿಸಲಿ' ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಶಿವಲಿಂಗೇಗೌಡರು ಜೆಡಿಎಸ್ನಲ್ಲೇ ಇರ್ತಾರಾ ಇಲ್ಲವ ಎಂಬ ಸಂಗತಿ ಬಗೆಹರಿಯಲಿ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.
ಶಿವಲಿಂಗೇಗೌಡರು ಕಾಂಗ್ರೆಸ್ ಸೇರಲಿದ್ದಾರಾ ಎನ್ನುವ ಅನುಮಾನ ಹೊರಹಾಕಿರುವ ಜೆಡಿಎಸ್ ಕಾರ್ಯಕರ್ತರು 'ನಮಗೆ ಶಿವಲಿಂಗೇಗೌಡ ರು ಕಾಂಗ್ರೆಸ್ ಗೆ ಹೋಗುತ್ತಾರೆಂಬ ಅನುಮಾನ ದಟ್ಟವಾಗಿದೆ. ರೇವಣ್ಣನವರು ಯಾರನ್ನೇ ಅಭ್ಯರ್ಥಿ ಮಾಡಿದರೂ ನಾವು ಸಿದ್ದರಿದ್ದೆವೆ. ಆದರೆ ಅರಸೀಕೆರೆಗೆ ಅಭ್ಯರ್ಥಿ ಯಾರು ಎಂದು ಸ್ಪಷ್ಟವಾಗಬೇಕು. ಇಂದು ಅವರ ಬಳಿ ಸಮಸ್ಯೆ ಇತ್ಯರ್ಥಕ್ಕೆ ನಾವು ಬಂದಿದ್ದೆವೆ' ಎಂದು ಅರಸೀಕೆರೆ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿ ಗೊಂದಲದ ಬಗ್ಗೆ ಭುಗಿಲೆದ್ದಿದ್ದಾರೆ.