ನಗರದ ವಿವಿಧೆಡೆ ಧಾರಾಕಾರ ಮಳೆ

ನಗರದ ವಿವಿಧೆಡೆ ಧಾರಾಕಾರ ಮಳೆ

ಬೆಂಗಳೂರು: ನಗರದಲ್ಲಿ ಕೆಲದಿನ ಗಳಿಂದ ಬಿಡುವು ನೀಡಿದ್ದ ಮಳೆ, ಮಂಗಳವಾರ ಸಂಜೆ ಧಾರಾಕಾರವಾಗಿ ಸುರಿಯಿತು.

ಮಂಗಳವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಕಾಣಿಸಿಕೊಂಡು, ಸಂಜೆ ವೇಳೆ ಜೋರು ಮಳೆಯಾಯಿತು.

ರಾಜ್ಯೋತ್ಸವ ದಿನವಾಗಿದ್ದರಿಂದ ನಗರದ ಹಲವೆಡೆ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಜೋರು ಮಳೆಯಿಂದಾಗಿ ಕಾರ್ಯಕ್ರಮಗಳ ಆರಂಭಕ್ಕೆ ತೊಂದರೆ ಉಂಟಾಯಿತು. ಕೆಲವರು ಸುರಿಯುವ ಮಳೆಯಲ್ಲೇ ಕಾರ್ಯಕ್ರಮ ನಡೆಸಿದರು.

ಮೆಜೆಸ್ಟಿಕ್, ಗಾಂಧಿನಗರ, ಸಂಪಂಗಿ ರಾಮನಗರ, ಶಾಂತಿನಗರ, ವಿಲ್ಸನ್ ಗಾರ್ಡನ್, ಲಾಲ್‌ಬಾಗ್, ರಿಚ್ಮಂಡ್ ಟೌನ್, ಅಶೋಕನಗರ, ಎಂ.ಜಿ.ರಸ್ತೆ, ಶಿವಾಜಿನಗರ, ಹಲಸೂರು, ವಸಂತ ನಗರ, ಆರ್‌.ಟಿ.ನಗರ, ಹೆಬ್ಬಾಳ, ಸಂಜಯನಗರ, ಮತ್ತಿಕೆರೆ, ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ವಿಜಯನಗರ, ದೀಪಾಂಜಲಿನಗರ ಹಾಗೂ ಸುತ್ತಮುತ್ತ ಜೋರು ಮಳೆ ಸುರಿಯಿತು.

ರಾಜರಾಜೇಶ್ವರಿನಗರ, ಕೆಂಗೇರಿ, ಗಿರಿನಗರ, ಬನಶಂಕರಿ, ಬಸವನಗುಡಿ, ಯಲಹಂಕ, ವಿದ್ಯಾರಣ್ಯಪುರ, ಹನು ಮಂತನಗರ, ಜಯನಗರ, ಜೆ.ಪಿ.ನಗರ, ಪುಟ್ಟೇನಹಳ್ಳಿ ಹಾಗೂ ಸುತ್ತಮುತ್ತ
ಪ್ರದೇಶಗಳಲ್ಲೂ ಮಳೆ ಆಯಿತು.

ಮಳೆ ವೇಳೆ ಜೋರು ಗಾಳಿಯೂ ಬೀಸಿತು. ಇದರಿಂದಾಗಿ ಕೆಲವೆಡೆ ಮರದ ಕೊಂಬೆಗಳು ನೆಲಕ್ಕುರುಳಿದ್ದವು. ಸರ್ಕಾರಿ ರಜಾ ದಿನವಾಗಿದ್ದರಿಂದ ಬಹುತೇಕ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಕಡಿಮೆ ಇತ್ತು.

ವಿಧಾನಸೌಧ ಸುತ್ತಮುತ್ತ ದಟ್ಟಣೆ: ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲು ವಿಧಾನಸೌಧ ಮೆಟ್ಟಿಲು ಬಳಿ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮಾ ರಂಭಕ್ಕೆ ಬಂದಿದ್ದರಿಂದ, ವಿಧಾನಸೌಧ ಸುತ್ತಮುತ್ತ ದಟ್ಟಣೆ ಕಂಡುಬಂತು.

ಕಾರ್ಯಕ್ರಮ ಮುಗಿದ ನಂತರ, ಜನರೆಲ್ಲರೂ ಸ್ಥಳದಿಂದ ನಿರ್ಗಮಿಸಿದರು. ಈ ವೇಳೆಯೇ ವಾಹನಗಳ ದಟ್ಟಣೆ ಉಂಟಾಯಿತು.

'ನಗರದಲ್ಲಿ ಆಗಾಗ ಮೋಡ ಕವಿದ ವಾತಾವರಣ ಕಾಣಿಸುವುದು ಸಾಮಾನ್ಯವಾಗಿದೆ. ಮಂಗಳವಾರ ಧಾರಾಕಾರ ಮಳೆ ಸುರಿದಿದ್ದು, ರಸ್ತೆಯಲ್ಲಿ ನೀರು ಹರಿಯುತ್ತಿದ್ದ ದೂರುಗಳು ಬಂದಿ ದ್ದವು. ಸ್ಥಳಕ್ಕೆ ತೆರಳಿದ್ದ ಸಿಬ್ಬಂದಿ, ನೀರು ತೆರವು ಮಾಡಿದ್ದಾರೆ' ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು