ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ನಡೆಸುತ್ತಿರುವುದು ದುರಂತದ ವಿಚಾರ : ಬಿಜೆಪಿ ನಾಯಕ ಸಿ.ಟಿ.ರವಿ

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ವಿಚಾರದ ಕುರಿತಂತೆ ಬಿಜೆಪಿ ನಾಯಕ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದು, 40 ವರ್ಷದ ರಾಜಕೀಯ ಅನುಭವವಿದ್ದರೂ ಕ್ಷೇತ್ರ ಹುಡುಕಾಡುತ್ತಿರುವುದು ದುರಂತ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ ರವಿ ಅವರು, ಸಿದ್ದರಾಮಯ್ಯ ಅವರಿಗೆ 40 ವರ್ಷದ ರಾಜಕೀಯ ಅನುಭವ ಇದೆ. ಈಗಲೂ ಕ್ಷೇತ್ರ ಹುಡುಕಾಟ ನಡೆಸುತ್ತಿರುವುದು ದುರಂತದ ವಿಚಾರ. ಸಿದ್ದರಾಮಯ್ಯಗೆ ಮೈಸೂರು ಭಾಗದಲ್ಲಿ ಗೆಲ್ಲುವ ವಿಶ್ವಾಸವಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಬಳಿಕ ವಿಶ್ವಾಸ ಕಳೆದುಕೊಂಡಿದ್ದಾರೆ. 2 ನೇ ಬಾರಿಗೆ ಬಾದಾಮಿ ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸ ಅವರಿಗಿಲ್ಲ ಹೀಗಾಗಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯರ ಗೆಲುವನ್ನು ಜನರು ನಿರ್ಧಾರ ಮಾಡ್ತಾರೆ. ಜನರ ತೀರ್ಮಾನದ ಬಗ್ಗೆ ನಾವೇನು ಹೇಳಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.