ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗ ಯಶಸ್ವಿ: ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ
ನವದೆಹಲಿ: ವಿವಿಧ ರೀತಿಯ ಗುರಿಗಳನ್ನು ಭೇದಿಸುವ ಸಾಮರ್ಥ್ಯದ, ದೇಶೀಯವಾಗಿ ಅಭಿವೃದ್ಧಿಪಡಿಸಲಾದ 2ನೇ ಹಂತದ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ (ಬಿಎಂಡಿ) ಇಂಟರ್ಸೆಪ್ಟರ್ ಎಡಿ -1 ಕ್ಷಿಪಣಿಯ ಉಡಾವಣಾ ಪರೀಕ್ಷೆಯನ್ನು ಭಾರತ ಬುಧವಾರ ಯಶಸ್ವಿಯಾಗಿ ನಡೆಸಿದ್ದು, ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಮೂಡಿಸಿದೆ.
ಒಡಿಶಾ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್ಡಿಒ) ರಕ್ಷಣಾ ಕಣ್ಗಾವಲಿನ ಈ ಕ್ಷಿಪಣಿಯನ್ನು ಎಲ್ಲ ರೀತಿಯ ಶಸ್ತ್ರಾಸ್ತ್ರಗಳ ವ್ಯವಸ್ಥೆಯೊಂದಿಗೆ ಪ್ರಯೋಗಿಸಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
'ಇದೊಂದು ಅನನ್ಯ ಪ್ರಕಾರದ ಕಣ್ಗಾವಲು ಕ್ಷಿಪಣಿ. ವಿಶ್ವದ ಕೆಲವೇ ರಾಷ್ಟ್ರಗಳ ಬಳಿ ಇರುವ ಸುಧಾರಿತ ತಂತ್ರಜ್ಞಾನಗಳನ್ನು ಇದು ಒಳಗೊಂಡಿದೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.
ಎಡಿ-1 ದೀರ್ಘ ವ್ಯಾಪ್ತಿಯ ಕಣ್ಗಾವಲು ಕ್ಷಿಪಣಿಯಾಗಿದೆ. ಇದನ್ನು ವಾಯುಮಂಡಲದೊಳಗೆ ಮತ್ತು ಅದರಾಚೆಗೆ ದಾಳಿ ಮಾಡುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರತಿಬಂಧಿಸುವಂತೆ ವಿನ್ಯಾಸಗೊಳಿಸಲಾಗಿದೆ.