ಸಿದ್ದು ನಂಬಿಕೆ ಉಳಿಸಿಕೊಂಡಿಲ್ಲ: ಸಿಎಂ

ಸಿದ್ದು ನಂಬಿಕೆ ಉಳಿಸಿಕೊಂಡಿಲ್ಲ: ಸಿಎಂ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಜನಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಭೈರತಿ ಬಸವರಾಜ, ಪಕ್ಷದ ರಾಷ್ಟ್ರೀಯ ಮುಖಂಡ ಸಿ.ಟಿ. ರವಿ ಇದ್ದಾರೆ.

ಬೆಂಗಳೂರು,ನ.೧೫- ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯರವರು ಸಾಧನೆ ಏನೂ ಇಲ್ಲ, ಸಿದ್ದರಾಮಯ್ಯರವರು ಜನರ ನಂಬಿಕೆಯನ್ನು ಉಳಿಸಿಕೊಂಡಿಲ್ಲ. ಈಗ ಮತ್ತೆ ಅವರನ್ನು ನಂಬುವ ಸ್ಥಿತಿಯಲ್ಲಿ ಜನ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜನಸಂಕಲ್ಪಯಾತ್ರೆಗಾಗಿ ಚಿಕ್ಕಮಗಳೂರಿನ ಕಡೂರಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೧೩ರಲ್ಲಿ ಸಿದ್ದರಾಮಯ್ಯರವರು ಭಾವನಾತ್ಮಕವಾಗಿ ಮತ ಕೇಳಿ ಅಧಿಕಾರಕ್ಕೆ ಬಂದರು. ಆದರೆ, ಅವರು ಜನರ ಮಾತುಗಳಿಗೆ ಬೆಲೆ ನೀಡಿಲ್ಲ. ಅವರ ಆಡಳಿತ ಕಾಲದಲ್ಲಿ ಕೊಲೆ, ಸುಲಿಗೆ ಜಾಸ್ತಿಇತ್ತು. ಹಾಗಾಗಿ ಜನ ಅವರನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಮತ್ತ ಅವರನ್ನು ನಂಬಲ್ಲ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಈಗಲೂ ಭಾವನಾತ್ಮಕವಾಗಿ ಮತ ಕೇಳುತ್ತಿದ್ದಾರೆ. ನನಗೆ ಇದು ಕೊನೇ ಚುನಾವಣೆ, ಆರೋಗ್ಯ ಸರಿಯಿಲ್ಲ, ಮತ್ತೆ ಸಿಎಂ ಆಗಬೇಕಾದರೆ ನೀವು ಮತ ಹಾಕಬೇಕು ಎಂದೆಲ್ಲ ಹೇಳುತ್ತಿದ್ದಾರೆ. ಅವರಿಗೇನೂ ಆಗುವುದು ಬೇಡ, ಅವರು ನೂರು ಕಾಲ ಬದುಕಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.
ಈ ಹಿಂದಿನ ಚುನಾವಣೆಯಲ್ಲೂ ಸಿದ್ದರಾಮಯ್ಯ ಇದೇ ರೀತಿ ಮಾತನಾಡಿ, ಜನರನ್ನು ನಂಬಿಸಿದ್ದರು. ಆದರೆ, ಈ ಬಾರಿ ಜನ ಇಂತಹ ಮಾತಿಗೆ ಬೆಲೆ ನೀಡಲ್ಲ. ಎಲ್ಲವನ್ನೂ ವಿಶ್ಲೇಷಣೆ ಮಾಡಿ ಮತ ಹಾಕುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.