ಬೆಂಗಳೂರು ಜನರಿಗೆ ಗುಡ್ನ್ಯೂಸ್ : ' ಪಾರ್ಕ್ಗಳ ಪ್ರವೇಶ ಸಮಯ ' ವಿಸ್ತರಿಸಿದ ಬಿಬಿಎಂಪಿ
ಬೆಂಗಳೂರು : ಬೆಂಗಳೂರಿನ ಜನರ ಬಹುಕಾಲ ಬೇಡಿಕೆಯಾಗಿದ್ದ ಪಾರ್ಕ್ಗಳ ಸಮಯ ವಿಸ್ತರಣೆಗೆ ಬಿಬಿಎಂಪಿ ಗ್ರೀನ್ ಸಿಗ್ನಲ್ ನೀಡಿದೆ. ಇನ್ನು ಮುಂದೆ ಜನರು ಉದ್ಯಾನವನಗಳಲ್ಲಿ ಆರಾಮವಾಗಿ ಹೆಚ್ಚು ಸಮಯ ಕಳೆಯಬಹುದು. ಜನರ ಪ್ರತಿಭಟನೆ ನಂತರ ಎಚ್ಚೆತ್ತುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂಗಳವಾರ ನಗರದಾದ್ಯಂತ ಉದ್ಯಾನವನಗಳ ಸಾರ್ವಜನಿಕ ಪ್ರವೇಶ ಸಮಯವನ್ನು ವಿಸ್ತರಿಸಿ ಆದೇಶಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಂಗಳವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ. ಆದೇಶದ ಪ್ರಕಾರ, ಉದ್ಯಾನವನಗಳು ಇನ್ನು ಮುಂದೆ ಪ್ರತಿದಿನ ಬೆಳಗ್ಗೆ 5 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತವೆ.
ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಕೆಲವು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಇದಕ್ಕೂ ಮುನ್ನ ಸಿಲಿಕಾನ್ ಸಿಟಿಯಲ್ಲಿ ಉದ್ಯಾನವನಗಳು ಬೆಳಗ್ಗೆ 6 ರಿಂದ 10 ಮತ್ತು ಸಂಜೆ 4 ರಿಂದ 7 ರವರೆಗೆ ಮಾತ್ರ ಸಾರ್ವಜನಿಕರಿಗೆ ಮುಕ್ತವಾಗಿದ್ದವು.
ಉದ್ಯಾನವನಗಳ ಪ್ರವೇಶ ಸಮಯ ಬದಲಾವಣೆ
ಉದ್ಯಾನವನಗಳಲ್ಲಿ ಬೆಳಗ್ಗೆ 10 ಗಂಟೆಯ ಬಳಿಕ ಜನರಿಗೆ ವಿಶ್ರಾಂತಿ ಪಡೆಯಲು ಉಚಿತ ಸಾರ್ವಜನಿಕ ಪ್ರವೇಶವನ್ನು ನಿರಾಕರಿಸಲಾಗಿತ್ತು. ಹಲವು ಕಾಲಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿತ್ತು. ಸಾರ್ವಜನಿಕರು ಈ ಕ್ರಮದ ಕುರಿತು ಪ್ರತಿಭಟನೆ ಆರಂಭಿಸಿದ್ದರು. ದಿನದ ಕೆಲವೇ ಕೆಲವು ಗಂಟೆಗಳು ಮಾತ್ರ ಜನರಿಗೆ ಉದ್ಯಾನವನಗಳ ಬಳಕೆಗೆ ಅವಕಾಶವಿದೆ. ಇವುಗಳ ಪ್ರವೇಶ ಸಮಯವನ್ನು ಬದಲಾಯಿಸಬೇಕೆಂದು ನಾಗರಿಕರು ಪ್ರತಿಭಟಿಸುತ್ತಿದ್ದರು
ಇಡೀ ದಿನ ತೆರೆದಿರುವ ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್
ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 1,118 ಉದ್ಯಾನಗಳಿವೆ. ಉಳಿದವುಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಡೆಸುತ್ತಿದೆ
ನಗರದ ಎರಡು ದೊಡ್ಡ ಮತ್ತು ಅತ್ಯಂತ ಜನಪ್ರಿಯ ಉದ್ಯಾನವನಗಳಾದ ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ಗಳನ್ನು ರಾಜ್ಯದ ತೋಟಗಾರಿಕೆ ಇಲಾಖೆ ನಿರ್ವಹಿಸುತ್ತದೆ. ನಗರದಲ್ಲಿ ಈ ಎರಡು ಉದ್ಯಾನವನಗಳು ಮಾತ್ರ ದಿನವಿಡೀ ತೆರೆದಿರುತ್ತವೆ. ಸಮಸ್ಯೆ ಏನೆಂದರೆ ಎರಡು ಪಾರ್ಕ್ಗಳು ಬಹುತೇಕ ವಸತಿ ಪ್ರದೇಶಗಳಿಂದ ದೂರದಲ್ಲಿವೆ. ಹೆಚ್ಚಿನ ಸಾರ್ವಜನರಿಕೆ ಬಳಕೆಗೆ ದೊರೆಯುವುದಿಲ್ಲ
ವಿವಿಧ ನಿವಾಸಿ ಕಲ್ಯಾಣ ಸಂಘಗಳು ಮತ್ತು ವಾಕಿಂಗ್ ಗುಂಪುಗಳ ಮನವಿಗಳನ್ನು ಸ್ವೀಕರಿಸಿ, ನಾವು ಸಮಯವನ್ನು ವಿಸ್ತರಿಸಲು ನಿರ್ಧರಿಸಿದ್ದೇವೆ' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. 'ಉದ್ಯಾನವನಗಳನ್ನು ದಿನವಿಡೀ ತೆರೆದಿಡಲು ಕಷ್ಟಸಾಧ್ಯ. ಏಕೆಂದರೆ ಮುಂಜಾನೆ ಅಥವಾ ಸಂಜೆಯ ವೇಳೆ ಅವುಗಳನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಈಗ ಸ್ವಚ್ಛತೆಗೆ ಸಿಬ್ಬಂದಿಗೆ ಬೆಳಗಿನ ಜಾವ ಎರಡೂವರೆ ಗಂಟೆ ಕಾಲಾವಕಾಶ ನೀಡಿದ್ದೇವೆ. ಜೊತೆಗೆ ಹೊಸ ಸಮಯಕ್ಕೆ ಬದ್ಧವಾಗಿರುವಂತೆ ನಾವು ಎಲ್ಲಾ ಅಧಿಕಾರಿಗಳಿಗೆ ಸುತ್ತೋಲೆಯಲ್ಲಿ ತಿಳಿಸಿದ್ದೇವೆ' ಎಂದು ಮಾಹಿತಿ ನೀಡಿದ್ದಾರೆ
ಬಿಬಿಎಂಪಿಯ ಈ ಹೊಸ ಆದೇಶವು ನಗರದ ಕೆರೆಗಳಿಗೆ ಅನ್ವಯಿಸುವುದಿಲ್ಲ. 'ಕೆರೆಗಳು ಕೇವಲ ಉದ್ಯಾನವನಗಳಂತಲ್ಲ. ಅಲ್ಲಿನ ಪರಿಸರವೇ ಬೇರೆ. ಪಕ್ಷಿಗಳ ಸಂಖ್ಯೆ ಹೆಚ್ಚಳಕ್ಕೆ ಬೇಕಾದ ಪರಿಸರ ಅಗತ್ಯಗಳನ್ನು ಹೊಂದಿವೆ. ಜೊತೆಗೆ ನಿರ್ವಹಣೆ ಸಮಯವೂ ಹೆಚ್ಚಾಗಿದೆ. ಆದ್ದರಿಂದ, ಈ ಹೊಸ ಆದೇಶವನ್ನು ಉದ್ಯಾನವನಗಳಿಗೆ ಸೀಮಿತಗೊಳಿಸಲಾಗುತ್ತದೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತ, ಬಿಬಿಎಂಪಿಯು ಬೆಂಗಳೂರಿನ ಅತ್ಯಂತ ಪ್ರಮುಖ ಪ್ರತಿಭಟನಾ ಸ್ಥಳಗಳಲ್ಲಿ ಒಂದಾದ ಮೌರ್ಯ ವೃತ್ತದ ಬಳಿಯ ಗಾಂಧಿ ಪಾರ್ಕ್ ಅನ್ನು 1.23 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದೆ.https://assets-news-bcdn.dailyhunt.in/cmd/resize/750x490_90/fetchdata16/images/41/56/41/41564118ffceed10614fd1e55aa5e80937b7bf49937aa7c63cd739cdfe00d044.webp